ಚುನಾವಣೆ ಸಂದರ್ಭದಲ್ಲಿ ತಾನು ನೀಡಿದ್ದ ಆಶ್ವಾಸನೆಯಂತೆ ಕಾಂಗ್ರೆಸ್ ಸರ್ಕಾರ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡಲು ಸಿದ್ಧತೆ ನಡೆಸಿದೆ. ಜೂನ್ 11 ರಿಂದ ಇದು ಜಾರಿಗೆ ಬರಲಿದ್ದು, ಮಹಿಳೆಯರು ಹೊರ ರಾಜ್ಯಗಳನ್ನು ಹೊರತುಪಡಿಸಿ ಕರ್ನಾಟಕದಾದ್ಯಂತ ಸಾರಿಗೆ ನಿಗಮದ ಬಸ್ಸುಗಳಲ್ಲಿ ಉಚಿತವಾಗಿ ಸಂಚರಿಸಬಹುದಾಗಿದೆ.
ಇದರ ಮಧ್ಯೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನಿವೃತ್ತ ನೌಕರರು ನಮಗೂ ಕೂಡ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಪ್ರಸ್ತುತ ನಿವೃತ್ತ ನೌಕರರು ಪ್ರಯಾಣಿಸಲು ವಾರ್ಷಿಕ 500 ರೂಪಾಯಿ ಶುಲ್ಕ ವಿಧಿಸುತ್ತಿದ್ದು, ಇದನ್ನು ತೆರವುಗೊಳಿಸಿ ಉಚಿತ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.
35 – 40 ವರ್ಷಗಳ ಕಾಲ ಸಂಸ್ಥೆಯ ಏಳಿಗೆಗಾಗಿ ನಾವುಗಳು ದುಡಿದಿದ್ದು, ಹೀಗಾಗಿ ನಿವೃತ್ತಿ ನಂತರ ಪ್ರಯಾಣಕ್ಕಾಗಿ ನಮ್ಮಿಂದ 500 ರೂಪಾಯಿ ವಸೂಲಿ ಮಾಡುವುದು ಸರಿಯಲ್ಲ. ಹೀಗಾಗಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಿ ಎಂದು ಕೆ ಎಸ್ ಆರ್ ಟಿ ಸಿ ಸ್ಟಾಪ್ ಅಂಡ್ ವರ್ಕರ್ಸ್ ಫೆಡರೇಷನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿಕೊಂಡಿದೆ.