ರವಾ, ಮೊಸರು ಮತ್ತು ಹಾಲು ಬಳಸಿ ಮಾಡುವ ಮೃದುವಾದ ಸಿಹಿಯಾದ ಕೇಕ್ ಇದು. ಮೊಟ್ಟೆ ತಿನ್ನದೇ ಇರುವ ಸಸ್ಯಾಹಾರಿಗಳಿಗಂತೂ ಬೆಸ್ಟ್ ರೆಸಿಪಿ. ಆರೇಂಜ್ ಸಿರಪ್, ತೆಂಗಿನ ಹಾಲು, ರೋಸ್ ವಾಟರ್ ಅಥವಾ ಇನ್ಯಾವುದೇ ಫ್ಲೇವರ್ ನ ಶುಗರ್ ಸಿರಪ್ ಬಳಸಿ ಕೂಡ ಇದನ್ನು ಮಾಡಬಹುದು.
ಬೇಕಾಗುವ ಸಾಮಗ್ರಿ : ಅರ್ಧ ಕಪ್ ಕರಗಿಸಿಟ್ಟ ಬೆಣ್ಣೆ, ಒಂದು ಕಪ್ ಸಕ್ಕರೆ ಪುಡಿ, ಒಂದೂವರೆ ಕಪ್ ಬಾಂಬೆ ರವಾ, ಅರ್ಧ ಕಪ್ ಮೈದಾ, ಚಿಟಿಕೆ ಉಪ್ಪು, ಕಾಲು ಚಮಚ ಏಲಕ್ಕಿ ಪುಡಿ, ಕಾಲು ಕಪ್ ಮೊಸರು, ಒಂದು ಕಪ್ ಹಾಲು, ಮುಕ್ಕಾಲು ಚಮಚ ಬೇಕಿಂಗ್ ಪೌಡರ್, ಅರ್ಧ ಚಮಚ ಬೇಕಿಂಗ್ ಸೋಡಾ, ಒಂದು ಬೊಗಸೆಯಷ್ಟು ಹೆಚ್ಚಿದ ಬಾದಾಮಿ, ಪಿಸ್ತಾ ಮತ್ತು ಗೋಡಂಬಿ.
ಮಾಡುವ ವಿಧಾನ : ಮೊದಲು ಒಂದು ಬೌಲ್ ನಲ್ಲಿ ಬೆಣ್ಣೆ ಮತ್ತು ಸಕ್ಕರೆ ಪುಡಿ ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ. ನಂತರ ರವಾ, ಮೈದಾ, ಉಪ್ಪು ಮತ್ತು ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ. ಮೊಸರು ಮತ್ತು ಹಾಲನ್ನು ಬೆರೆಸಿ ಅರ್ಧ ಗಂಟೆ ಹಾಗೇ ಬಿಡಿ. ನಂತರ ಬೇಕಿಂಗ್ ಸೋಡಾ ಮತ್ತು ಬೇಕಿಂಗ್ ಪೌಡರ್ ಹಾಕಿ. ಜೊತೆಗೆ ಡ್ರೈ ಫ್ರೂಟ್ಸ್ ಕೂಡ ಬೆರೆಸಿ. ಚೆನ್ನಾಗಿ ಮಿಕ್ಸ್ ಮಾಡಿ ರೆಡಿಯಾದ ಮಿಶ್ರಣವನ್ನು ಕೇಕ್ ಟಿನ್ ನೊಳಕ್ಕೆ ಹಾಕಿ. ಅದನ್ನು ಓವನ್ ನಲ್ಲಿಟ್ಟು 180 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ 40 ನಿಮಿಷ ಬೇಯಿಸಿ. ಓವನ್ ನಿಂದ ಹೊರತೆಗೆದ ಮೇಲೆ ಕೇಕ್ ಅನ್ನು ತಣ್ಣಗಾಗಲು ಬಿಡಿ. ನಂತರ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ ಸರ್ವ್ ಮಾಡಿ.