ಒಡಿಶಾದ ಬಾಲಸೋರ್‌ನಲ್ಲಿ ಭೀಕರ ರೈಲು ಅಪಘಾತ ನಡೆದ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಥಳದಲ್ಲಿದ್ದು ಪ್ರಧಾನಿ ಮೋದಿ ಘಟನೆ ಬಗ್ಗೆ ವಿವರಿಸಿದರು. ದುರಂತ ಸ್ಥಳಕ್ಕೆ ಭೇಟಿ ನೀಡಿದ ಪ್ರಜಾನಿ ಮೋದಿ ಪರಿಸ್ಥಿತಿ ಪರಿಶೀಲಿಸಿದರು. ಬಳಿಕ ಅವರು ಕಟಕ್‌ನ ಆಸ್ಪತ್ರೆಗಳಲ್ಲಿ ಗಾಯಗೊಂಡವರನ್ನು ಭೇಟಿಯಾಗಲಿದ್ದಾರೆ.
ನಿನ್ನೆ ರಾತ್ರಿ ಒಡಿಶಾದಲ್ಲಿ ಜರುಗಿದ ರೈಲು ಅಪಘಾತದಲ್ಲಿ 260ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಘಟನೆ ಬಗ್ಗೆ ಪ್ರಧಾನಿ ಮೋದಿ ರೈಲ್ವೆ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಬಹು ರೈಲುಗಳ ಅಪಘಾತದಲ್ಲಿ ರಕ್ಷಣೆ, ಚಿಕಿತ್ಸೆ ಮತ್ತು ಇತರ ವಿಷಯಗಳ ಬಗ್ಗೆ ಪ್ರಧಾನಿ ಮೋದಿ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗಂಟೆಗೆ ಸುಮಾರು 127 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಕೋರಮಂಡಲ್ ಎಕ್ಸ್ ಪ್ರೆಸ್ , ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಮುಖ್ಯ ಮಾರ್ಗದಲ್ಲಿ ಹಳಿ ತಪ್ಪಿತು. ಈ ಘರ್ಷಣೆಯ ಕೆಲವೇ ನಿಮಿಷಗಳಲ್ಲಿ ಹೌರಾಕ್ಕೆ ಹೋಗುವ ಯಶವಂತನಗರ ಎಕ್ಸ್ ಪ್ರೆಸ್ ಎದುರು ಭಾಗದಿಂದ ಕೋರಮಂಡಲ್ ಎಕ್ಸ್ ಪ್ರೆಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ದುರಂತ ಸಂಭವಿಸಿತು.