ಭುವನೇಶ್ವರ್: ಒಡಿಶಾದ ಬಾಲಸೋರ್ ನಲ್ಲಿ ನಡೆದ ಕೋರಮಂಡಲ್ ಎಕ್ಸ್ ಪ್ರೆಸ್ ರೈಲು ಅಪಘಾತದಲ್ಲಿ 50 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ಬಾಲಸೋರ್ ಜಿಲ್ಲೆಯ ಬಹನಾಗ ರೈಲು ನಿಲ್ದಾಣದ ಸಮೀಪ ಘಟನೆ ನಡೆದಿದೆ. 179 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಿಕ್ಕಿಯ ರಭಸಕ್ಕೆ 10 ಬೋಗಿಗಳು ಹಳಿಯಿಂದ ಉರುಳಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಶುಕ್ರವಾರ ಸಂಜೆ 7 ಗಂಟೆಗೆ ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್ ಪ್ರೆಸ್ ನ 10-12 ಬೋಗಿಗಳು ಬಾಲೇಶ್ವರದ ಬಳಿ ಹಳಿತಪ್ಪಿ ಎದುರಿನ ಹಳಿಯಲ್ಲಿ ಬಿದ್ದವು. ಸ್ವಲ್ಪ ಸಮಯದ ನಂತರ ಯಶವಂತಪುರದಿಂದ ಹೌರಾಕ್ಕೆ ತೆರಳುವ ಮತ್ತೊಂದು ರೈಲು ಹಳಿತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದು ಅದರ 3-4 ಕೋಚ್‌ಗಳು ಹಳಿತಪ್ಪಿ ಅಪಘಾತ ಸಂಭವಿಸಿದೆ.
3 ಎನ್‌ಡಿಆರ್‌ಎಫ್ ಘಟಕಗಳು, 4 ಒಡಿಆರ್‌ಎಫ್ ಘಟಕಗಳು ಮತ್ತು 60 ಆಂಬ್ಯುಲೆನ್ಸ್ ಕಾರ್ಯಾಚರಣೆಯಲ್ಲಿ ಬಾಗಿಯಾಗಿದ್ದು, ನೂರಾರು ಸ್ಥಳೀಯರು ಕೂಡ ಸಹಾಯ ಹಸ್ತ ಚಾಚಿದ್ದಾರೆ.
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಕಂದಾಯ ಸಚಿವೆ ಪ್ರಮೀಳಾ ಸ್ವೈನ್ ಮತ್ತು ವಿಶೇಷ ಪರಿಹಾರ ಆಯುಕ್ತ ಸತ್ಯಬ್ರತ ಸಾಹು ಅವರಿಗೆ ಅಪಘಾತದ ಸ್ಥಳಕ್ಕೆ ತಲುಪಿ ಶೋಧ ಮತ್ತು ರಕ್ಷಣಾ ತಂಡಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ.
ಸಹಾಯವಾಣಿ ಸಂಖ್ಯೆಗಳ ಬಿಡುಗಡೆ
ಹೌರಾ ಸಹಾಯವಾಣಿ ಸಂಖ್ಯೆ: 033-26382217
ಖರಗ್‌ಪುರ ಸಹಾಯವಾಣಿ ಸಂಖ್ಯೆ: 8972073925 & 9332392339
ಬಾಲಸೋರ್ ಸಹಾಯವಾಣಿ ಸಂಖ್ಯೆ: 8249591559 & 7978418322
ಶಾಲಿಮಾರ್ ಸಹಾಯವಾಣಿ ಸಂಖ್ಯೆ: 9903370746
ಮೋದಿ ಸಂತಾಪ:
ಪ್ರಧಾನಿ ನರೇಂದ್ರ ಮೋದಿಯವರು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಕರೆ ಮಾಡಿ ಅಪಘಾತದ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದಾರೆ.
ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತ ಆಘಾತ ತಂದಿದೆ. ಈ ದುಃಖದ ಸಮಯದಲ್ಲಿ ದುಃಖಿತ ಕುಟುಂಬಗಳೊಂದಿಗೆ ನಾವಿದ್ದೇವೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ. ರೈಲ್ವೆ ಸಚಿವರ ಜತೆ ಮಾತನಾಡಿದ್ದೇನೆ. ದುರಂತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲಾಗುತ್ತಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.