ಅನಾರೋಗ್ಯಕ್ಕೂ ಮುನ್ನ ದೇಹವು ಅನೇಕ ಸಂಕೇತಗಳನ್ನು ನೀಡುತ್ತದೆ. ಬಹಳಷ್ಟು ಬಾರಿ ಈ ಸಂಕೇತಗಳನ್ನು ಸಾಮಾನ್ಯವೆಂದು ಪರಿಗಣಿಸಿ ನಾವು ನಿರ್ಲಕ್ಷಿಸುತ್ತೇವೆ. ಆದರೆ ಹಾಗೆ ಮಾಡುವುದರಿಂದ ತೊಂದರೆಗೆ ಸಿಲುಕಬಹುದು. ಯಾವುದೇ ರೀತಿಯ ಕಾಯಿಲೆಯ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಏಕೆಂದರೆ ಈ ಲಕ್ಷಣಗಳು ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳೂ ಆಗಿರಬಹುದು. ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಯನ್ನು ಸರಿಯಾದ ಸಮಯದಲ್ಲಿ ಪತ್ತೆ ಮಾಡಿದರೆ, ಅದನ್ನು ಗುಣಪಡಿಸಬಹುದು. ಕ್ಯಾನ್ಸರ್ ಬರುವ ಮೊದಲು ದೇಹವು ಯಾವ್ಯಾವ ರೀತಿಯ ಸಂಕೇತಗಳನ್ನು ನೀಡುತ್ತದೆ ಎಂಬುದನ್ನು ನೋಡೋಣ.
ಯಾವಾಗಲೂ ದಣಿದ ಭಾವನೆ- ಸಾಕಷ್ಟು ನಿದ್ದೆ ಮಾಡಿದರೆ ಮತ್ತು ಸರಿಯಾದ ಆಹಾರ ಕ್ರಮವನ್ನು ಅನುಸರಿಸಿದ ಬಳಿಕವೂ ಯಾವಾಗಲೂ ದಣಿವಾಗುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಏಕೆಂದರೆ ಆಯಾಸವು ಯಾವಾಗಲೂ ಕೆಲವು ಗಂಭೀರ ಅನಾರೋಗ್ಯದ ಕಾರಣದಿಂದಾಗಿರಬಹುದು.
ದೇಹದಲ್ಲಿ ವಿಪರೀತ ನೋವು – ದೇಹವು ದೀರ್ಘಕಾಲದವರೆಗೆ ನೋವಿನಿಂದ ಬಳಲುತ್ತಿದ್ದರೆ ಮತ್ತು ಅಸ್ವಸ್ಥತೆಯನ್ನು ಅನುಭವಿಸುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು. ಏಕೆಂದರೆ ಇವೆಲ್ಲವೂ ಯಾವುದೋ ಪ್ರಮುಖ ಕಾಯಿಲೆಯ ಲಕ್ಷಣ. ಆದ್ದರಿಂದ ದೇಹದಲ್ಲಿ ನೋವು ಅಥವಾ ಅಸ್ವಸ್ಥತೆಯಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಹಠಾತ್ ತೂಕ ನಷ್ಟ – ಆಹಾರ ಮತ್ತು ದೇಹದ ಚಟುವಟಿಕೆಗಳನ್ನು ಬದಲಾಯಿಸದೆ ನೀವು ವೇಗವಾಗಿ ತೂಕವನ್ನು ಕಳೆದುಕೊಳ್ಳುತ್ತಿದ್ದರೆ, ಅದು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಏಕೆಂದರೆ ಕ್ಯಾನ್ಸರ್ ಇದ್ದರೆ ದೇಹದ ತೂಕ ವೇಗವಾಗಿ ಕಡಿಮೆಯಾಗುತ್ತದೆ. ಹಾಗಾಗಿ ನಿಮಗೂ ಹೀಗಾಗುತ್ತಿದ್ದರೆ ನಿರ್ಲಕ್ಷಿಸಬೇಡಿ.
ಚರ್ಮದ ಬದಲಾವಣೆಗಳು – ಚರ್ಮದ ಬದಲಾವಣೆಗಳು ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳಲ್ಲಿ ಒಂದು. ಕ್ಯಾನ್ಸರ್ ಇದ್ದರೆ ವ್ಯಕ್ತಿಯ ಚರ್ಮದ ಬಣ್ಣವು ಬದಲಾಗಲು ಪ್ರಾರಂಭಿಸುತ್ತದೆ. ಕ್ಯಾನ್ಸರ್‌ನಿಂದಾಗಿ ಚರ್ಮದಲ್ಲಿ ವಿಪರೀತ ತುರಿಕೆ, ರಕ್ತಸ್ರಾವ ಮತ್ತು ದದ್ದುಗಳ ಸಮಸ್ಯೆ ಬರಬಹುದು. ತ್ವಚೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೆ ಅದನ್ನು ನಿರ್ಲಕ್ಷಿಸಬೇಡಿ.