ಡಾರ್ಕ್ ಚಾಕೊಲೇಟ್ ಆರೋಗ್ಯಕ್ಕೆ ಉತ್ತಮ ಅನ್ನೋದು ಬಹುತೇಕ ಎಲ್ಲರಿಗೂ ತಿಳಿದಿದೆ. ಉದ್ವೇಗ ಮತ್ತು ಭಯವಿದ್ದಾಗ ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಮನಸ್ಸು ಶಾಂತವಾಗುತ್ತದೆ. ಇದು ಹಲವು ಅಧ್ಯಯನಗಳಲ್ಲೂ ದೃಢಪಟ್ಟಿದೆ. ರಕ್ತದೊತ್ತಡವನ್ನು ನಿಯಂತ್ರಿಸಲು ಸಹ ಡಾರ್ಕ್ ಚಾಕೊಲೇಟ್ ಪ್ರಯೋಜನಕಾರಿಯಾಗಿದೆ.
ಖಿನ್ನತೆಯನ್ನು ನಿವಾರಿಸುವಲ್ಲಿ ಡಾರ್ಕ್ ಚಾಕೊಲೇಟ್ ಸಹಕಾರಿ. ಇದನ್ನು ತಿನ್ನುವುದರಿಂದ ಒತ್ತಡದಿಂದಲೂ ಪಾರಾಗಬಹುದು. ಡಾರ್ಕ್ ಚಾಕೊಲೇಟ್ನಿಂದ ಇನ್ನೂ ಏನೇನು ಉಪಯೋಗವಿದೆ ಅನ್ನೋದನ್ನು ನೋಡೋಣ.
ಒತ್ತಡ ನಿವಾರಣೆ: ಅಧ್ಯಯನದ ಪ್ರಕಾರ ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಒತ್ತಡವನ್ನು ಕಡಿಮೆ ಮಾಡಬಹುದು. ಮಧ್ಯಮ ಗಾತ್ರದ ಅಂದರೆ 40 ಗ್ರಾಂ ಡಾರ್ಕ್ ಚಾಕೊಲೇಟ್ ಅನ್ನು ಪ್ರತಿದಿನ ಸುಮಾರು ಎರಡು ವಾರಗಳ ಕಾಲ ಸೇವಿಸಿದರೆ, ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಜೊತೆಗೆ ನ್ಯೂರೋ ಹಾರ್ಮೋನುಗಳ ಮಟ್ಟವನ್ನು ಕಡಿಮೆ ಮಾಡಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಒತ್ತಡದ ಸಮಸ್ಯೆ ಇದ್ದಾಗ ಕ್ಯಾಟೆಕೊಲಮೈನ್ ನರಪ್ರೇಕ್ಷಕವು ಅಧಿಕವಾಗಿರುತ್ತದೆ. ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಇದನ್ನು ಕಡಿಮೆ ಮಾಡಬಹುದು. ಸಂಶೋಧನೆಯ ಪ್ರಕಾರ ಡಾರ್ಕ್ ಚಾಕಲೇಟ್‌ನಲ್ಲಿ ಕೋಕೋ ಇರುತ್ತದೆ. ಇದು ಉತ್ಕರ್ಷಣ ನಿರೋಧಕಗಳು ಅಂದರೆ ಫ್ಲೇವನಾಯ್ಡ್‌ಗಳ ಉತ್ತಮ ಮೂಲವಾಗಿದೆ. ಹಾಗಾಗಿ ಆರೋಗ್ಯಕ್ಕೆ ಉತ್ತಮ. ಸಂಶೋಧಕರು ತಮ್ಮ ಅಧ್ಯಯನದಲ್ಲಿ 30 ಸಂಪೂರ್ಣ ಆರೋಗ್ಯವಂತ ವಯಸ್ಕರನ್ನು ಸೇರಿಸಿಕೊಂಡಿದ್ದರು. ಎರಡು ವಾರಗಳ ಕಾಲ ಪ್ರತಿದಿನ ಸುಮಾರು 40 ಗ್ರಾಂ ಡಾರ್ಕ್ ಚಾಕೊಲೇಟ್ ತಿನ್ನಲು ಕೊಟ್ಟಿದ್ದರು.
ಇವರಲ್ಲಿ ಒತ್ತಡದ ಹಾರ್ಮೋನ್ ಮಟ್ಟ ಕಡಿಮೆಯಾಗಿರುವುದು ಅಧ್ಯಯನದಲ್ಲಿ ಕಂಡುಬಂದಿದೆ.ಡಾರ್ಕ್ ಚಾಕೊಲೇಟ್ ಚಯಾಪಚಯ ಮತ್ತು ಕರುಳಿನಲ್ಲಿನ ಬ್ಯಾಕ್ಟೀರಿಯಾದ ಚಟುವಟಿಕೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ. ಫ್ಲೇವೊನಾಲ್ಸ್ ಎಂಬ ರಾಸಾಯನಿಕ ಸಂಯುಕ್ತವು ಡಾರ್ಕ್ ಚಾಕೊಲೇಟ್‌ನಲ್ಲಿ ಕಂಡುಬರುತ್ತದೆ.
ಇದು ಮೆದುಳಿನ ಕೆಲಸದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಮೆದುಳನ್ನು ಶಾಂತವಾಗಿರಿಸುವಾಗ ಪ್ರತಿಕ್ರಿಯೆ ಸಮಯ ಮತ್ತು ಸ್ಮರಣೆಯನ್ನು ಸುಧಾರಿಸುತ್ತದೆ. ಫ್ಲೇವೊನಾಲ್‌ಗಳು ಮೆದುಳಿನಲ್ಲಿ ರಕ್ತ ಪರಿಚಲನೆಯನ್ನು ಆರೋಗ್ಯಕರವಾಗಿರಿಸುತ್ತದೆ, ಇದರಿಂದಾಗಿ ಒತ್ತಡದಿಂದ ಪರಿಹಾರ ಸಿಗುತ್ತದೆ. ಡಾರ್ಕ್ ಚಾಕಲೇಟ್‌ನಲ್ಲಿರುವ ಉತ್ಕರ್ಷಣ ನಿರೋಧಕವು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಮತ್ತು ರಕ್ತ ಪರಿಚಲನೆ ಸುಧಾರಿಸಲು ಕೆಲಸ ಮಾಡುತ್ತದೆ. ಇದು ಒತ್ತಡದಿಂದ ಮುಕ್ತಿ ನೀಡುತ್ತದೆ.
ಡಾರ್ಕ್ ಚಾಕೊಲೇಟ್‌ನ ಪ್ರಯೋಜನಗಳೇನು ?
ಮೆದುಳಿನ ಆರೋಗ್ಯವನ್ನು ಸುಧಾರಿಸುವ ಮೂಲಕ, ಇದು ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಡಾರ್ಕ್ ಚಾಕೊಲೇಟ್ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ರಕ್ತದೊತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.