ಬೆಂಗಳೂರು: ರಾಜ್ಯದ ಪ್ರತಿ ಪಂಚಾಯತಿ ಮಟ್ಟದಲ್ಲಿಯೂ ನವೋದಯ ಮಾದರಿ ಉನ್ನತ ಗುಣಮಟ್ಟದ ಶಾಲೆಯ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ತಾವು ಓದಿದ ಶಾಲೆಗೆ ಸೋಮವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳ್ಳಿಯಿಂದ ಶಿಕ್ಷಣಕ್ಕಾಗಿ ಮಕ್ಕಳು ನಗರಕ್ಕೆ ವಲಸೆ ಬರುವುದನ್ನು ತಡೆಯಲು ಪ್ರತಿ ಪಂಚಾಯತಿ ಮಟ್ಟದಲ್ಲಿ ನವೋದಯ ಮಾದರಿ ಉನ್ನತ ಗುಣಮಟ್ಟದ ಶಾಲೆ ಆರಂಭಿಸಲಾಗುವುದು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರತಿ ಪಂಚಾಯತಿಯಲ್ಲಿ ನವೋದಯ ಮಾದರಿ ಶಾಲೆ ಆರಂಭಿಸುವ ಪ್ರಸ್ತಾಪವಿದ್ದು, ಇದನ್ನು ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ಗುರುಗಳಾದ ಗೋಪಾಲಕೃಷ್ಣ ಅವರಿಂದ ಮಾಹಿತಿ ಪಡೆದುಕೊಂಡಿದ್ದೇನೆ ಎಂದರು.
ಹಳ್ಳಿ ಜನರಿಗೂ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕೆಂಬ ಹಂಬಲವಿದ್ದು, ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ. ಕೊಟ್ಟ ಮಾತಿನಂತೆ ಯೋಜನೆ ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ.