ಬೆಂಗಳೂರು: ಬಿಪಿಎಲ್ ಕಾರ್ಡ್ ಹೊಂದಿದ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ಉಚಿತವಾಗಿ ನೀಡುವುದಾಗಿ ಘೋಷಿಸಲಾಗಿದೆ. ಇದರಿಂದಾಗಿ ಬಿಪಿಎಲ್ ಪಡಿತರ ಚೀಟಿ ಪಡೆಯಲು ಬೇಡಿಕೆ ಹೆಚ್ಚಾಗಿದೆ.
ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಆಹಾರ ಇಲಾಖೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಹೀಗಾಗಿ ಹೊಸ ಪಡಿತರ ಚೀಟಿ ಸದ್ಯಕ್ಕೆ ಸಿಗುವುದಿಲ್ಲ ಎಂದು ಹೇಳಲಾಗಿದೆ.
ಚುನಾವಣೆ ನೀತಿ ಸಂಹಿತೆ ಜಾರಿಯಾದಾಗಿನಿಂದ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಿಲ್ಲಿಸಲಾಗಿದೆ. ಅಂದಿನಿಂದ ಹೊಸದಾಗಿ ಬಿಪಿಎಲ್, ಅಂತ್ಯೋದಯ ಕಾರ್ಡ್ ಗಳನ್ನು ನೀಡುತ್ತಿಲ್ಲ.
ಬಿಪಿಎಲ್ ಪಡಿತರ ಚೀಟಿ ಕೋರಿ ಸಲ್ಲಿಸಲಾದ ಅರ್ಜಿಗಳಲ್ಲಿ 3,43,856 ಅರ್ಜಿಗಳು ಬಾಕಿ ಉಳಿದಿವೆ. ಸರ್ಕಾರದ ಅನುಮತಿ ಪಡೆಯಲು ಆಹಾರ ಇಲಾಖೆ ಕಾಯುತ್ತಿದ್ದು, ಅನುಮತಿ ದೊರೆತಲ್ಲಿ ವಿಲೇವಾರಿ ಪ್ರಕ್ರಿಯೆ ಆರಂಭಿಸಲಾಗುವುದು.
ಇನ್ನು ನಿಗದಿತ ಮಾನದಂಡ ಉಲ್ಲಂಘಿಸಿ ರಾಜ್ಯಾದ್ಯಂತ ಆರ್ಥಿಕವಾಗಿ ಸಬಲರಾಗಿದ್ದವರು ಪಡೆದುಕೊಂಡಿದ್ದ 3.30 ಲಕ್ಷ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. 3,08, 345 ಬಿಪಿಎಲ್ ಕಾರ್ಡ್ ಗಳು ಹಾಗೂ 21,679 ಅಂತ್ಯೋದಯ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ. ಕೆಲವು ಕಾರ್ಡುಗಳನ್ನು ಎಪಿಎಲ್ ಗೆ ಬದಲಾವಣೆ ಮಾಡಿಕೊಡಲಾಗಿದೆ. 17,338 ಸರ್ಕಾರಿ, ಅರೆ ಸರ್ಕಾರಿ ವಲಯದ ನೌಕರರು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದು, ಅವುಗಳನ್ನು ರದ್ದು ಮಾಡಲಾಗಿದೆ.