ರಿಲಾಯನ್ಸ್ ಸಮೂಹದ ಮಾಲೀಕ ಮುಖೇಶ್ ಅಂಬಾನಿ ಮಡದಿ ನೀತಾ ಅಂಬಾನಿ ನೇತೃತ್ವದ ಮುಂಬೈ ಇಂಡಿಯನ್ಸ್ ಐಪಿಎಲ್ 2023ರ ಪ್ಲೇಆಫ್ ಸುತ್ತಿನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋತು ಕೂಟದಿಂದ ಹೊರಬಿದ್ದಿದೆ. ಆದರೂ ಸಹ ಅಂಬಾನಿಗಳು 16ನೇ ಆವೃತ್ತಿಯ ಐಪಿಎಲ್‌ನಲ್ಲಿ ನೂರಾರು ಕೋಟಿ ಆದಾಯ ಕಂಡಿದ್ದಾರೆ ಎಂದು ವರದಿಗಳು ತಿಳಿಸುತ್ತಿವೆ.
2008ರಲ್ಲಿ 916 ಕೋಟಿ ರೂ. ಗಳನ್ನು ತೆತ್ತು ಐಪಿಎಲ್‌ನ ಮುಂಬೈ ಫ್ರಾಂಚೈಸಿ ಖರೀದಿಸಿದ್ದರು ಮುಖೇಶ್ ಅಂಬಾನಿ. ಐಪಿಎಲ್‌ನಲ್ಲಿ ಐದು ಬಾರಿ ಪ್ರಶಸ್ತಿ ಜಯಿಸಿದ ಅತ್ಯಂತ ಯಶಸ್ವಿ ತಂಡವೆನಿಸಿರುವ ಮುಂಬೈ ಇಂಡಿಯನ್ಸ್, ದೊಡ್ಡ ಸಂಖ್ಯೆಯಲ್ಲಿ ಪ್ರಾಯೋಜಕರನ್ನು ಪಡೆದಿದ್ದು, ಭಾರೀ ದೊಡ್ಡ ಬ್ರಾಂಡ್ ಮೌಲ್ಯ ಹೊಂದಿದೆ.
ಐಪಿಎಲ್‌ನಲ್ಲಿ ಅತ್ಯಂತ ಹೆಚ್ಚು ಲಾಭ ಕಂಡಿರುವ ತಂಡವಾದ ಮುಂಬೈ ಇಂಡಿಯನ್ಸ್‌ನ ಬ್ರಾಂಡ್ ಮೌಲ್ಯ 10,070 ಕೋಟಿ ರೂ.ನಷ್ಟಿದೆ ಎಂದು ’ದಿ ಟ್ರಿಬ್ಯೂನ್’ ವರದಿ ಮಾಡಿದೆ.
ಇದರೊಂದಿಗೆ ಮರ್ಕಂಡೈಸ್, ಪಂದ್ಯದ ಟಿಕೆಟ್‌ಗಳು, ಮಾಧ್ಯಮದ ಪ್ರಾಯೋಜಕತ್ವ ಹಾಗೂ ಜಾಹೀರಾತುಗಳ ಮೂಲಕ ರಿಲಾಯನ್ಸ್ ಸಮೂಹಕ್ಕೆ ಮುಂಬೈ ಇಂಡಿಯನ್ಸ್‌ನಿಂದ ಅಪಾರ ಪ್ರಮಾಣದಲ್ಲಿ ದುಡ್ಡು ಹರಿದು ಬರುತ್ತಿದೆ. ಈ ಬಾರಿಯ ಐಪಿಎಲ್‌ನ ಆನ್ಲೈನ್ ಪ್ರಸರಣದಿಂದ ರಿಲಾಯನ್ಸ್ ಸಮೂಹದ ಜಿಯೋ ಸಿನೆಮಾಗೆ ಲಾಭವಾಗಿದೆ.
ಡಿಸ್ನಿ+ ಹಾಟ್‌ಸ್ಟಾರ್‌ನಿಂದ ಐಪಿಎಲ್‌ನ ಆನ್ಲೈನ್ ಪ್ರಸಾರದ ಹಕ್ಕನ್ನು ರಿಲಾಯನ್ಸ್ ಸಮೂಹದ ವಯಾಕಾಮ್ ಗೆ 22,290 ಕೋಟಿ ರೂ.ಗೆ ನೀಡಲಾಗಿತ್ತು. ಈ ವರ್ಷದ ಐಪಿಎಲ್ ಪ್ರಸಾರದಿಂದಲೇ ರಿಲಾಯನ್ಸ್ ಸಮೂಹಕ್ಕೆ 23,000 ಕೋಟಿ ರೂ.ಗಳು ಹರಿದು ಬಂದಿವೆ. ಮುಂದಿನ ವರ್ಷಗಳಲ್ಲಿ ಈ ಆದಾಯ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬರುವ ನಿರೀಕ್ಷೆಯಿದೆ.