ಬೆಂಗಳೂರು: ಸಂಪುಟ ವಿಸ್ತರಣೆ ಬೆನ್ನಲ್ಲೇ ಅಸಮಾಧಾನ ಸ್ಪೋಟಗೊಂಡಿದ್ದು, ಸಚಿವ ಸ್ಥಾನ ವಂಚಿತ ಶಾಸಕರ ಬೆಂಬಲಿಗರು ವಿವಿಧೆಡೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಪುಟ ವಿಸ್ತರಣೆಯ ಜೊತೆಗೆ ಖಾತೆ ಹಂಚಿಕೆ ಮಾಡಲಾಗಿದ್ದು, ರಾಜ್ಯಪಾಲರ ಅಂಕಿತದೊಂದಿಗೆ ಅಧಿಕೃತ ಆದೇಶ ಹೊರ ಬಿದ್ದಿದೆ. ನಿರೀಕ್ಷಿತ ಖಾತೆ ಸಿಗದಿರುವುದಕ್ಕೆ ಹಲವು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ಪ್ರಮುಖ ಖಾತೆಗಳನ್ನು ಈ ಹಿಂದೆ ನಿರ್ವಹಿಸಿದ್ದ ರಾಮಲಿಂಗಾರೆಡ್ಡಿ ಅವರಿಗೆ ಸಾರಿಗೆ ಖಾತೆ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರಿಗೆ ಖಾತೆ ನೀಡುವುದಾದರೆ ಸಚಿವ ಸ್ಥಾನವೇ ಬೇಡ ಎಂದು ಅವರು ಆಪ್ತರ ಬಳಿ ಹೇಳಿದ್ದಾರೆ ಎನ್ನಲಾಗಿದೆ.
ತಮಗೆ ಗೃಹ ಖಾತೆ ಬೇಡವೆಂದು ಹೇಳಿದ್ದರೂ ಡಾ.ಜಿ. ಪರಮೇಶ್ವರ್ ಅವರಿಗೆ ಗೃಹ ಖಾತೆಯ ಹೊಣೆ ವಹಿಸಲಾಗಿದೆ. ಇದರಿಂದಾಗಿ ಅವರು ಬೇಸರಗೊಂಡಿದ್ದಾರೆ ಎಂದು ಹೇಳಲಾಗಿದೆ.
ಗೃಹ ಖಾತೆಯ ಮೇಲೆ ಕಣ್ಣಿಟ್ಟಿದ್ದ ಪ್ರಿಯಾಂಕ್ ಖರ್ಗೆ ಅವರಿಗೆ ಗ್ರಾಮೀಣಾಭಿವೃದ್ಧಿ ಖಾತೆ ಜವಾಬ್ದಾರಿ ನೀಡಿದ್ದು, ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ ಎಂದು ಹೇಳಲಾಗಿದೆ. ಆರೋಗ್ಯ ಸಚಿವರಾಗಿದ್ದ ಶಿವಾನಂದ ಪಾಟೀಲ್ ಗೆ ಜವಳಿ ಮತ್ತು ಸಕ್ಕರೆ ಖಾತೆ ನೀಡಿದ್ದು, ಅದನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಈ ಹಿಂದೆ ಹಲವು ಪ್ರಮುಖ ಖಾತೆಯ ಜವಾಬ್ದಾರಿ ನಿರ್ವಹಿಸಿದ್ದ ಹೆಚ್.ಕೆ. ಪಾಟೀಲ್ ತಮಗೆ ಮಹತ್ವದ ಖಾತೆ ನೀಡಿಲ್ಲವೆಂದು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.