ಕೇರಳದ ಕೃಷಿ ಭೂಮಿಯೊಂದರಲ್ಲಿ ಪಟಾಕಿ ಸಿಡಿಸುತ್ತಿರುವ ವಿಡಿಯೋವನ್ನು ದೂರದ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ ನಡೆದ ಗಲಭೆ ಎಂದು ಸುಳ್ಳಾಗಿ ಬಿಂಬಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯ ಕಾವಸ್ಸೆರಿಯ ಶ್ರೀ ಭಗವತಿ ದೇವಸ್ಥಾನದ ಆವರಣದಲ್ಲಿ ಹೀಗೆ ಪಟಾಕಿ ಸಿಡಿಸಲಾಗಿದೆ ಎಂದು ಬೂಮ್ ತಿಳಿಸಿದೆ. ಕಾವಾಸೇರಿ ಪೂರಂ ಹಬ್ಬದ ಸಂದರ್ಭದಲ್ಲಿ ಈ ಪಟಾಕಿ ಸಿಡಿತ ಆಯೋಜಿಸಲಾಗಿತ್ತು ಎಂದು ದೇವಸ್ಥಾನದ ಸಿಬ್ಬಂದಿ ಖುದ್ದು ಬೂಮ್‌ಗೆ ಸ್ಪಷ್ಟನೆ ನೀಡಿದ್ದಾರೆ.
“ಪಶ್ಚಿಮ ಬಂಗಾಳವು ಕೋಮು ದೊಳ್ಳುರಿಯ ಮೇಲೆ ಹೇಗೆ ಕುಳಿತಿದೆ ಎಂದು ನೋಡಿ. ಈ ಭಯಂಕರ ದೃಶ್ಯ ಪೂರ್ವ ಮಿಡ್ನಾಪುರದ ದೃಶ್ಯವಾಗಿದೆ. ಮಮತಾ (ಮುಖ್ಯಮಂತ್ರಿ) ರಾಜ್ಯದ ಮೇಲೆ ಯಾವುದೇ ನಿಯಂತ್ರಣ ಹೊಂದಿಲ್ಲ. ಇಲ್ಲಿ ಸೂಕ್ತವಾದ ಕಾನೂನು ಸುವ್ಯವಸ್ಥೆ ಇಲ್ಲ. ಜಂಗಲ್ ರಾಜ್ ನಡೆಯುತ್ತಿದೆ,” ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸುನೀಲ್ ದೇವಧರ್ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದರು.
ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಚೆಕ್ ಮಾಡಿದ ಬೂಮ್, ವೈರಲ್ ಆಗಿರುವ ವಿಡಿಯೋದ ಕೀಫ್ರೇಂಗಳನ್ನು ಬಳಸಿ ಆಳವಾದ ಶೋಧ ಮಾಡಿದ್ದು, ಇದೇ ವಿಡಿಯೋವನ್ನು ’ಕಾವಸ್ಸೆರಿ ಪೂರಂ ವೇದಿಕ್ಕೆಟ್ಟು’ ಎಂದು ಕ್ಯಾಪ್ಷನ್ ಕೊಟ್ಟು ಯೂಟ್ಯೂಬ್‌ನಲ್ಲಿ ಶಾರ್ಟ್ ಮಾಡಿ ಹಾಕಿರುವುದು ಕಂಡು ಬಂದಿದೆ.