ಅರಿಜ಼ೋನಾದ 60 ವರ್ಷದ ವ್ಯಕ್ತಿಯೊಬ್ಬರಿಗೆ ಹಾಗೂ ಅವರ ಸಾಕು ನಾಯಿ ಮೇಲೆ ದಾಳಿ ಮಾಡಿದ 1,000+ ಜೇನ್ನೊಣಗಳು ಸುಮಾರು 250ಕ್ಕೂ ಹೆಚ್ಚು ಬಾರಿ ಕಚ್ಚಿವೆ. ಅಗ್ನಿಶಾಮಕ ಸಿಬ್ಬಂದಿ ಈ ಇಬ್ಬರ ರಕ್ಷಣೆಗೆ ಬಂದು ಜೇನ್ನೊಣಗಳನ್ನು ಓಡಿಸಿ, ಅವರನ್ನು ರಕ್ಷಿಸಿದ್ದಾರೆ.
ಜಾನ್ ಫಿಶರ್, 60, ಹೆಸರಿನ ಈ ವ್ಯಕ್ತಿ ಹಾಗು ಅವರ ಸಾಕುನಾಯಿ ಪಿಪ್ಪಿನ್ ಇಲ್ಲಿನ ಫ್ಲಾರೆನ್ಸ್ ಉಪನಗರದಲ್ಲಿ ಶನಿವಾರ ರಾತ್ರಿ ವಾಕಿಂಗ್ ಮಾಡುತ್ತಿದ್ದರು. ಎಂಟು ವರ್ಷಗಳ ಹಿಂದೆ ಒಂದು ಕಾಲನ್ನು ಕಳೆದುಕೊಂಡಿದ್ದ ಫಿಶರ್, ಗಾಬರಿಗೊಂಡು ಗಾಲಿಕುರ್ಚಿಯಿಂದ ಕೆಳಗೆ ಬಿದ್ದು, ನೆಲದ ಮೇಲೆ ತೆವಳುತ್ತಾ ಜೇನ್ನೊಣಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.
ಈ ವೇಳೆ ತಮ್ಮ ದೇಹದಲ್ಲಿ 250ಕ್ಕೂ ಹೆಚ್ಚು ನೊಣಗಳು ಕಚ್ಚಿದ ಗುರುತುಗಳಾಗಿರುವುದಾಗಿ ಫಿಶರ್ ತಿಳಿಸಿದ್ದಾರೆ. ಫಿಶರ್‌ರ ಕಣ್ಣುಗಳು, ಕಿವಿಗಳೂ, ಕಾಲುಗಳೂ, ಕೈಗಳು ಹಾಗೂ ಹಿಂಬದಿಯ ಮೇಲೆ ಜೇನ್ನೊಣಗಳು ದಾಳಿ ಮಾಡಿವೆ. ಅವರ ಸಾಕುನಾಯಿ ಪಿಪ್ಪಿನ್‌ಗೂ 50ಕ್ಕೂ ಹೆಚ್ಚು ನೊಣಗಳು ಕಚ್ಚಿವೆ. ನಾಯಿಯ ಸ್ಥಿತಿ ಚಿಂತಾಜನಕವಾಗಿದೆ.