ರೈಲುಗಳಿಗೆ ಕಲ್ಲು ತೂರುವ ಕಿಡಿಗೇಡಿಗಳ ಕಾರಣದಿಂದ ಮೈಸೂರು – ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಳೆದ ಆರು ತಿಂಗಳ ಅವಧಿಯಲ್ಲಿ 64 ಕಿಟಕಿಗಳನ್ನು ಬದಲಿಸಬೇಕಾಗಿ ಬಂದಿದೆ.
ತಮಿಳುನಾಡಿನಲ್ಲಿ ಏಳು ಪ್ರತ್ಯೇಕ ಘಟನೆಗಳಲ್ಲಿ ಏಳು ಕಿಟಕಿಗಳನ್ನು ದುಷ್ಕರ್ಮಿಗಳು ಹಾಳುಗೆಡವಿದ್ದಾರೆ. ಮಿಕ್ಕ ಪ್ರಕರಣಗಳು ಬೆಂಗಳೂರು ವಿಭಾಗದ ಜೋಳಾರ್‌ಪೇಟೆಯಲ್ಲಿ ಜರುಗಿವೆ.
ಬೆಂಗಳೂರಿನಲ್ಲೇ 26 ಕಿಟಕಿಗಳು ಕಲ್ಲು ತೂರಾಟಗಾರ ದುಷ್ಕರ್ಮಿಗಳ ಹಾವಳಿಗೆ ಹಾನಿಗೊಂಡಿವೆ ಎಂದು ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ಮ್ಯಾನೇಜರ್ ಕುಸುಮಾ ತಿಳಿಸಿದ್ದಾರೆ. ಇವುಗಳಲ್ಲಿ 10ರಷ್ಟು ಪ್ರಕರಣಗಳು ರಾಮನಗರ – ಮಂಡ್ಯ ನಡುವೆ ಜರುಗಿದ್ದು, ಮಿಕ್ಕವು ಬೆಂಗಳೂರು ಕಂಟೋನ್ಮೆಂಟ್ – ಮಾಲೂರುಗಳ ನಡುವೆ ಸಂಭವಿಸಿವೆ.
ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಕಿಟಕಿಗಳು ಇತರೆ ರೈಲುಗಳಿಗೆ ಹೋಲಿಸಿದರೆ ಬಹಳ ವಿಶಾಲವಾಗಿದ್ದು, ಕ್ಲಲು ತೂರಾಟಗಾರರಿಗೆ ಸುಲಭದ ಗುರಿಯಾಗಿವೆ. ಒಂದೊಂದು ಕಿಟಕಿಗೆ 12,000 ರೂ. ಉತ್ಪಾದನಾ ವೆಚ್ಚ ಹಾಗೂ ಅಳವಡಿಕೆಗೆಂದು ಹೆಚ್ಚುವರಿಯಾಗಿ 8,000 ರೂ.ಗಳು ಸೇರಿ ಒಂದೊಂದು ಕಿಟಕಿಗೂ 20,000 ರೂ.ಗಳನ್ನು ವ್ಯಯಿಸಲಾಗುತ್ತಿದೆ. ಈ 64 ಕಿಟಕಿಗಳನ್ನು ಬದಲಿಸಿ ಹಾಕಲು 12,80,000 ರೂ.ಗಳು ಖರ್ಚಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಚಲಿಸುತ್ತಿರುವ ರೈಲುಗಳಿಗೆ ಕಲ್ಲು ತೂರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಸಿಕ್ಕಿಬಿದ್ದಲ್ಲಿ ಆರು ತಿಂಗಳಿನಿಂದ 10 ವರ್ಷಗಳ ಕಾಲ ಜೈಲು ಶಿಕ್ಷೆಯಾಗುವ ಸಂಭವವಿದೆ. ರೈಲುಗಳಿಗೆ ಕಲ್ಲು ತೂರುವ ಮಂದಿಯ ಮೇಲೆ ಕಣ್ಣಿಡಲು ವಿಶೇಷ ಭದ್ರತಾ ಸಿಬ್ಬಂದಿಯನ್ನು ಬೆಂಗಳೂರು ರೈಲ್ವೇ ವಿಭಾಗ ನೇಮಿಸಿದೆ.