ಬೆಂಗಳೂರು: ದಂಪತಿ ನಡುವಿನ ಮಕ್ಕಳ ಸುಪರ್ದಿಗೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ಕೇಸು ಸೋತ ಪೋಷಕರಿಗೂ ಮಕ್ಕಳ ಭೇಟಿಗೆ ಸೂಕ್ತ ಅವಕಾಶ ಕಲ್ಪಿಸಬೇಕು ಎಂದು ಹೈಕೋರ್ಟ್ ಹೇಳಿದೆ.
ತನ್ನ ಅಪ್ರಾಪ್ತ ಮಗನನ್ನು ಕೋರ್ಟ್ ಮುಂದೆ ಹಾಜರುಪಡಿಸಲು ಪತ್ನಿಗೆ ನಿರ್ದೇಶನ ನೀಡುವಂತೆ ಕೋರಿ ವ್ಯಕ್ತಿ ಒಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರ ನೇತೃತ್ವದ ವಿಭಾಗಿಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಮಗುವಿನ ಪೋಷಕತ್ವಕ್ಕೂ, ಮಗುವಿನ ಸುಪರ್ದಿಗೂ ವ್ಯತ್ಯಾಸವಿದ್ದು, ಮಕ್ಕಳ ಸುಪರ್ದಿ ಪ್ರಕರಣಗಳಲ್ಲಿ ಕೇಸು ಸೋತ ಪೋಷಕರಿಗೆ ಭೇಟಿಯ ಹಕ್ಕು ನೀಡಬೇಕಾಗುತ್ತದೆ. ಈ ಮೂಲಕ ಮಗು ತಂದೆಯ ಜೊತೆ ಸಾಮಾಜಿಕ, ಭೌತಿಕ ಸಂಪರ್ಕ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದೆ.
ಪ್ರಕರಣದಲ್ಲಿ ಅಪ್ರಾಪ್ತ ಮಗನ ಭೇಟಿ ಹಕ್ಕು, ಸುಪರ್ದಿ ಮತ್ತು ಪೋಷಕತ್ವಕ್ಕೆ ಸಂಬಂಧಿಸಿದಂತೆ ಪತಿಯೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಪತ್ನಿ ಪಾಲಿಸಬೇಕು. ಕೂಡಲೇ ಮಗನನ್ನು ಪತಿಯ ಸುಪರ್ದಿಗೆ ಒಪ್ಪಿಸಬೇಕು. ಜೂನ್ 4ರವರೆಗೆ ಮಗನನ್ನು ತಂದೆ ತನ್ನ ಸುಪರ್ದಿಯಲ್ಲಿ ಇಟ್ಟುಕೊಳ್ಳಬಹುದು. ಈ ಅವಧಿಯಲ್ಲಿ ಅರ್ಜಿದಾರ ತಂದೆಯ ತಾಯಿ, ಸಹೋದರಿ ಮಗುವಿನೊಂದಿಗೆ ನೆಲೆಸಿರಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.
ಮಗನಿಗೆ ತಾಯಿ ಪ್ರತಿದಿನ ಸಂಜೆ 6ರಿಂದ 7 ಗಂಟೆಯವರೆಗೆ ವಿಡಿಯೋ ಕಾಲ್ ಮಾಡಿ ಯೋಗ ಕ್ಷೇಮ ವಿಚಾರಿಸಬಹುದು ಎಂದು ನಿರ್ದೇಶನ ನೀಡಿದ ಹೈಕೋರ್ಟ್ ಅರ್ಜಿಯನ್ನು ಇತ್ಯರ್ಥಪಡಿಸಿದೆ.
2011ರಲ್ಲಿ ಮದುವೆಯಾಗಿದ್ದ ದಂಪತಿ ಕೌಟುಂಬಿಕ ವ್ಯಾಜ್ಯದ ಹಿನ್ನೆಲೆಯಲ್ಲಿ 2014ರ ನಂತರ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ತನಗೆ ಮತ್ತು ಮಗನಿಗೆ ಜೀವನಾಂಶ ನೀಡಲು ಪತಿಗೆ ನಿರ್ದೇಶಕಂತೆ ಕೋರಿ ಪತ್ನಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಜೀವನಾಂಶ ನೀಡಲು ಕೋರ್ಟ್ ಸೂಚಿಸಿದ್ದು, ಈ ಆದೇಶ ಪ್ರಶ್ನಿಸಿ ಪತಿ ಹೈಕೋರ್ಟಿಗೆ ಮರು ಪರಿಶೀಲನೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಪತಿ-ಪತ್ನಿ ಸೌಹಾರ್ದಯುತವಾಗಿ ವ್ಯಾಜ್ಯ ಬಗೆಹರಿಸಿಕೊಳ್ಳಲು ಸಲಹೆ ನೀಡಿತ್ತು.
ಅಂತೆಯೇ ಮಗನನ್ನು ಪತ್ನಿಯ ಸುಪರ್ದಿಗೆ ನೀಡಲು ಒಪ್ಪಂದವಾಗಿದ್ದು, ಪ್ರತಿ ವಾರಾಂತ್ಯ, ಬೇಸಿಗೆ ರಜೆ ದಿನಗಳಲ್ಲಿ ಮಗನ ಭೇಟಿ ಮತ್ತು ಸುಪರ್ದಿ ಹಕ್ಕನ್ನು ಪತಿಗೆ ಕೊಡಲು ಒಪ್ಪಂದವಾಗಿತ್ತು. ಈ ಒಪ್ಪಂದವನ್ನು 2022ರ ಡಿಸೆಂಬರ್ ನಲ್ಲಿ ಪಾಲಿಸಿದ್ದ ಪತ್ನಿ 2023ರ ಜನವರಿಯಿಂದ ಪಾಲಿಸಿರಲಿಲ್ಲ. ಇದರಿಂದಾಗಿ ಪತಿ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಕೇಸ್ ಸೋತವರಿಗೂ ಮಕ್ಕಳ ಭೇಟಿಯ ಹಕ್ಕು ಇದೆ ಎಂದು ಹೇಳಿದೆ.