ಭೂಮಿಯ ಮೇಲಿನ ಅತ್ಯಂತ ಒದ್ದೆಯಾದ (ತೇವದಿಂದ ಕೂಡಿರುವ) ಸ್ಥಳವು ಭಾರತದ ಈಶಾನ್ಯದ ಮೇಘಾಲಯ ರಾಜ್ಯದಲ್ಲಿದೆ. ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿರುವ ಮೌಸಿನ್ರಾಮ್ ಈ ಬಿರುದನ್ನು ಪಡೆದಿದೆ. ಇದೀಗ ಅರುಣಾಚಲ ಪ್ರದೇಶದ ಕುರುಂಗ್ ಕುಮೆ ಜಿಲ್ಲೆಯ ಕೊಲೊರಿಯಾಂಗ್ ಪಟ್ಟಣವು ಭೂಮಿಯ ಮೇಲಿನ ಅತ್ಯಂತ ತೇವವಾದ ಸ್ಥಳ ಎಂಬ ಬಿರುದನ್ನು ಪಡೆಯಲು ಸ್ಪರ್ಧಿಸುತ್ತಿದೆ.
ವರದಿಯ ಪ್ರಕಾರ, ಮಳೆ ಜಾಸ್ತಿ ಸುರಿಯುತ್ತಿದೆ ಎಂಬ ಬಗ್ಗೆ ನಿಖರವಾದ ಅಳತೆಗಾಗಿ ಮಳೆ ಮಾಪಕಗಳನ್ನು ಸ್ಥಾಪಿಸುವಂತೆ ಅಲ್ಲಿನ ಜನ ಭಾರತೀಯ ಹವಾಮಾನ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಕೊಲೊರಿಯಾಂಗ್ ಪಟ್ಟಣವು ಮೌಸಿನ್ರಾಮ್‌ನ ಮಳೆಯ ದಾಖಲೆಗಳನ್ನು ಮೀರಿಸುತ್ತದೆ ಎಂದು ನಿವಾಸಿಗಳು ಪ್ರತಿಪಾದಿಸುತ್ತಿದ್ದಾರೆ.
ಸಮುದ್ರ ಮಟ್ಟದಿಂದ ಸುಮಾರು 1000 ಮೀಟರ್ ಎತ್ತರದಲ್ಲಿ ನೆಲೆಗೊಂಡಿರುವ ಕೊಲೊರಿಯಾಂಗ್ ಎತ್ತರದ ಪರ್ವತಗಳಿಂದ ಆವೃತವಾಗಿದೆ. ಸರ್ಲಿ, ಡ್ಯಾಮಿನ್ ಮತ್ತು ಪಾರ್ಸಿಪರ್ಲೋದಂತಹ ಆಡಳಿತ ಪ್ರದೇಶಗಳಿಂದ ಸುತ್ತುವರಿಯಲ್ಪಟ್ಟಿದೆ. ರಾಜ್ಯದ ರಾಜಧಾನಿ ಇಟಾನಗರದಿಂದ ಸರಿಸುಮಾರು 255 ಕಿ.ಮೀ ದೂರದಲ್ಲಿರುವ ಪಟ್ಟಣದ ನೈಸರ್ಗಿಕ ಸೌಂದರ್ಯವು ಪ್ರಕೃತಿಯ ನಡಿಗೆ ಮತ್ತು ಚಾರಣದಲ್ಲಿ ಆಸಕ್ತಿ ಹೊಂದಿರುವ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿನ ಸುಂದರವಾದ ಭೂದೃಶ್ಯ ಎಂಥವರನ್ನೂ ಮಂತ್ರಮುಗ್ಧಗೊಳಿಸುತ್ತದೆ.
ಕೊಲೊರಿಯಾಂಗ್‌ನಿಂದ ಕೇವಲ 40 ಕಿ.ಮೀ. ದೂರದಲ್ಲಿರುವ ಸರ್ಲಿ ಬಳಿಯ ಲುರುಗ್ ಪಾಸ್, ಭಾರಿ ಹಿಮಪಾತದಿಂದಾಗಿ ಪ್ರಮುಖ ಪ್ರವಾಸಿ ತಾಣವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಕೊಲೊರಿಯಾಂಗ್‌ನ ನಿವಾಸಿಗಳು, ಅಕ್ಟೋಬರ್‌ನಿಂದ ಡಿಸೆಂಬರ್ ತಿಂಗಳುವರೆಗೆ ಹೊರತುಪಡಿಸಿ ವರ್ಷವಿಡೀ ಅಸಾಧಾರಣವಾದ ಪ್ರವಾಹವನ್ನು ಅನುಭವಿಸಿದ್ದಾರೆ. ಇತರ ಪ್ರದೇಶಗಳಿಗೆ ಹೋಲಿಸಿದರೆ ಈ ಪಟ್ಟಣದಲ್ಲಿ ಅತ್ಯಧಿಕ ಪ್ರಮಾಣದ ಮಳೆಯಾಗುತ್ತದೆ ಎನ್ನಲಾಗಿದೆ. ಹೀಗಾಗಿ ಅಂಕಿ ಅಂಶಗಳನ್ನು ಪರಿಶೀಲಿಸಿದರೆ, ಕೊಲೊರಿಯಾಂಗ್ ಭೂಮಿಯ ಮೇಲಿನ ಅತ್ಯಂತ ತೇವವಾದ ಸ್ಥಳ ಎಂಬ ಬಿರುದು ಪಡೆಯಬಹುದು ಎಂಬುದು ನಿವಾಸಿಗಳು ಪ್ರತಿಪಾದನೆಯಾಗಿದೆ.
ಅಂದಹಾಗೆ, ಭೂಮಿಯ ಮೇಲಿನ ಪ್ರಸ್ತುತ ಅತ್ಯಂತ ತೇವವಾದ ಸ್ಥಳವೆಂದರೆ ಮೇಘಾಲಯ ರಾಜ್ಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿರುವ ಮೌಸಿನ್ರಾಮ್ ಪ್ರದೇಶ. ಇಲ್ಲಿ ಸರಾಸರಿ ವಾರ್ಷಿಕ ಮಳೆ 11,871 ಮಿಮೀ. ಮೌಸಿನ್ರಾಮ್ ಎಂಬ ಹೆಸರು ಸ್ವತಃ ಮೋಡಗಳ ವಾಸಸ್ಥಾನ ಎಂದೇ ಹೇಳಲಾಗುತ್ತದೆ.
ಇದಕ್ಕೂ ಮೊದಲು, ಮೇಘಾಲಯದ ಚಿರಾಪುಂಜಿ ಅಧಿಕ ಮಳೆಯಾಗುವ ಪ್ರದೇಶವಾಗಿತ್ತು. ಚಿರಾಪುಂಜಿಯು ಒಂದು ವರ್ಷದಲ್ಲಿ 11359.4 ಮಿಮೀ ಮಳೆಯನ್ನು ಪಡೆಯುತ್ತದೆ (1971-2020ರ ಅವಧಿಯ ಸರಾಸರಿ).