ಮೈಸೂರಿನಲ್ಲಿ ಸುರಿದ ಭಾರೀ ಮಳೆಗೆ ಇದುವರೆಗೂ ಮೂವರು ಸಾವನ್ನಪ್ಪಿದ್ದಾರೆ. ಜೀವಹಾನಿಯ ಜೊತೆಗೆ ಬೆಳೆಗಳಿಗೆ ಭಾರೀ ಹಾನಿಯಾಗಿದೆ.
ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಮಂಟಿಕೊಪ್ಪಲು ಗ್ರಾಮದ ರೈತ ಹರೀಶ್ (42) ಸಿಡಿಲು ಬಡಿದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜೋರು ಮಳೆ ಬಂದಾಗ ಅವರು ತಮ್ಮ ಜಮೀನಿನಲ್ಲಿದ್ದರು.
ಜಮೀನಿನ ಸಣ್ಣ ಶೆಡ್ನಲ್ಲಿ ಆಶ್ರಯ ಪಡೆದಿದ್ದ ಅವರು ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಶಾಸಕ ಜಿ.ಡಿ.ಹರೀಶ್ ಗೌಡ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಲು ತಹಶೀಲ್ದಾರ್ಗೆ ಸೂಚಿಸಿದರು.
ಪಿರಿಯಾಪಟ್ಟಣ ತಾಲೂಕಿನಲ್ಲಿ ರೈತ ಲೋಕೇಶ್ (53) ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಮಳೆ ಸುರಿಯಲಾರಂಭಿಸಿದ್ದರಿಂದ ಅವರು ಮರದ ಕೆಳಗೆ ಆಶ್ರಯ ಪಡೆದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದು ಬೈಲಕುಪ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಬರಸೆ ಗ್ರಾಮದಲ್ಲಿ ಭಾನುವಾರ ರಾತ್ರಿ ಕೃಷಿ ಜಮೀನಿನಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಕೆಳಗಾನಹಳ್ಳಿ ದೊಡ್ಡ ಕೊಪ್ಪಲು ಗ್ರಾಮದ 18 ವರ್ಷದ ಸ್ವಾಮಿ ಎಂಬುವವರು ಮೃತಪಟ್ಟಿದ್ದಾರೆ.
ಸ್ವಾಮಿ ಮತ್ತು ಅವರ ಇಬ್ಬರು ಗೆಳೆಯರಾದ ಹರೀಶ್ ಮತ್ತು ಸಂಜಯ್ ಗದ್ದೆಯಲ್ಲಿದ್ದ ವೇಳೆ ಭಾರೀ ಮಳೆ ಮತ್ತು ಗಾಳಿಯಿಂದ ನೆಲಕ್ಕೆ ಬಿದ್ದಿದ್ದ ವಿದ್ಯುತ್ ತಂತಿಗೆ ಆಕಸ್ಮಿಕವಾಗಿ ಕಾಲಿಟ್ಟಿದ್ದಾರೆ. ಸ್ವಾಮಿ ಸ್ಥಳದಲ್ಲೇ ಮೃತಪಟ್ಟರೆ, ಹರೀಶ್ ಮತ್ತು ಸಂಜಯ್ ಗಾಯಗೊಂಡಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಟ್ಟದಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಚಾಮರಾಜನಗರದಲ್ಲೂ ಅಬ್ಬರಿಸಿದ ಮಳೆ, ಭಾರೀ ಹಾನಿ
ಚಾಮರಾಜನಗರ ಜಿಲ್ಲೆಯಲ್ಲಿ ಭಾನುವಾರ ಸುರಿದ ಭಾರಿ ಮಳೆಗೆ ನೂರಾರು ಎಕರೆ ಪ್ರದೇಶದಲ್ಲಿದ್ದ ಬಾಳೆ ಹಾಗೂ ಇತರೆ ತೋಟಗಾರಿಕೆ ಬೆಳೆಗಳು ನಾಶವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿ ಬೆಳೆ ನಷ್ಟವಾಗಿದೆ.