ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಸಾಧಿಸಿರುವ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಹಾಗೂ 8 ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬರುತ್ತಲೆ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಂಡಿದ್ದು, ಈ ಹಿಂದಿನ ಸರ್ಕಾರದಲ್ಲಿ ನಿಗಮ – ಮಂಡಳಿಗಳಿಗೆ ನೇಮಕಗೊಂಡಿದ್ದವರ ಆದೇಶವನ್ನು ರದ್ದು ಮಾಡಲಾಗಿದೆ.
ಅಲ್ಲದೆ ಈ ಹಿಂದಿನ ಸರ್ಕಾರ ಕೈಗೊಂಡಿದ್ದ ಎಲ್ಲಾ ಇಲಾಖೆಗಳ ಹಾಗೂ ಇಲಾಖೆಗಳ ಅಧೀನಕ್ಕೊಳಪಡುವ ನಿಗಮ – ಮಂಡಳಿ – ಪ್ರಾಧಿಕಾರಿಗಳ ಕಾಮಗಾರಿಗಳ ಸಂಬಂಧಿಸಿದಂತೆ ಎಲ್ಲಾ ಮುಂದಿನ ಹಣ ಬಿಡುಗಡೆ / ಪಾವತಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಡೆಹಿಡಿಯಲು ಆದೇಶ ಹೊರಡಿಸಲಾಗಿದೆ.
ಇದಕ್ಕೆ ಕಿಡಿ ಕಾರಿರುವ ರಾಜ್ಯ ಬಿಜೆಪಿ, ದೆಹಲಿಗೆ ಕಪ್ಪ ಕಳುಹಿಸಲೇಬೇಕು. ಕಾಂಗ್ರೆಸ್ ಹೈಕಮಾಂಡಿಗೂ, ಸಿದ್ದರಾಮಯ್ಯನವರ ಎಟಿಎಂ ಸರ್ಕಾರಕ್ಕೂ ಇರುವ ಡೀಲೇ ಅದು. ಸರ್ಕಾರದ ಈ ಆದೇಶ ರಾಜ್ಯದ ಪ್ರಗತಿಗೆ ಮಾರಕ, ಕಾಂಗ್ರೆಸ್ ಖಜಾನೆಗೆ ಪೂರಕ ಎಂದು ಆಕ್ರೋಶ ವ್ಯಕ್ತಪಡಿಸಿದೆ.