ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಬಹುಮತ ಗಳಿಸಿದ್ದು, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಶನಿವಾರದಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಎಂಟು ಮಂದಿ ಶಾಸಕರು, ಸಚಿವರುಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಈ ಒಂದು ಕಾರ್ಯಕ್ರಮಕ್ಕೆ ನಾಡಿನ ನಾನಾ ಮೂಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಮಂದಿ ಸಾಕ್ಷಿಯಾಗಿದ್ದಾರೆ. ಅಲ್ಲದೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಗಣ್ಯರ ದೊಡ್ಡ ದಂಡೇ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿತ್ತು.
ಇದೆಲ್ಲದರ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಪುಟ್ಟ ಬಾಲಕನೊಬ್ಬನ ವಿಡಿಯೋ ಒಂದು ವೈರಲ್ ಆಗಿದ್ದು, ಇದರಲ್ಲಿ ‘ಹೆಂಗ್ ಉಳಿದ್ವೋ ನನ್ ಮೀಸಿ’ ಎಂದು ಅಪ್ಪಟ ಜವಾರಿ ಕನ್ನಡದಲ್ಲಿ ಆತ ಹೇಳಿದ್ದಾನೆ. ಅಷ್ಟಕ್ಕೂ ಮೂರು ವರ್ಷದ ಈ ಬಾಲಕನಿಗೆ ಇನ್ನೂ ಚಿಗುರು ಮೀಸೆಯೇ ಬಂದಿಲ್ಲ.
ಹಾಗಿದ್ದರೂ ಸಹ ಈತ ಹೀಗೆ ಹೇಳಲು ಕಾರಣವೇನೆಂದರೆ ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವುದಾಗಿ ಈತ ಹೇಳಿದ್ದ. ಆಗ ವಿಡಿಯೋ ಮಾಡುತ್ತಿದ್ದವರು ಸಿದ್ದರಾಮಯ್ಯ ಸಿಎಂ ಆಗದಿದ್ದರೆ…….. ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ ಬಾಲಕ ಅರ್ಧ ಮೀಸೆ ಬೋಳಿಸಿಕೊಳ್ಳುವುದಾಗಿ ಹೇಳಿದ್ದ. ಈಗ ಸಿದ್ದರಾಮಯ್ಯ ಸಿಎಂ ಆಗುವುದರೊಂದಿಗೆ ಬಾಲಕನಿಗೆ ‘ಇರದ’ ಅರ್ಧ ಮೀಸೆ ಉಳಿದಂತಾಗಿದೆ.