ಬೆಂಗಳೂರು: ನೂತನ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆ ಮುಕ್ತಾಯವಾಗಿದ್ದು, ಪ್ರಣಾಳಿಕೆಯಲ್ಲಿ ನಾವು ಹಲವು ಭರವಸೆಗಳನ್ನು ಘೋಷಿಸಿದ್ದೇವೆ. ಇವು ಕೇವಲ ಒಂದು ವರ್ಷದಲ್ಲಿ ಈಡೇರಿಸುವಂತದ್ದಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೂತನ ಸಿಎಂ ಸಿದ್ದರಾಮಯ್ಯ, 5 ಗ್ಯಾರಂಟಿಗಳ ಬಗ್ಗೆ ವಾಗ್ದಾನ ನೀಡಿದ್ದೇವೆ. ನಮ್ಮ ಸರ್ಕಾರ ನುಡಿದಂತೆ ನಡೆವ ಸರ್ಕಾರ. ಸಂಪುಟ ಸಭೆಯಲ್ಲಿ ಅನೇಕ ನಿರ್ಣಯಗಳನ್ನು ಕೈಗೊಂಡಿದ್ದೇವೆ. 5 ಗ್ಯಾರಂಟಿ ಈಡೇರಿಸಲು ಸುಮಾರು 50 ಸಾವಿರ ಕೋಟಿ ಹಣ ಬೇಕು. ನಮ್ಮ ರಾಜ್ಯದ ಬಜೆಟ್ 3 ಲಕ್ಷದ 10 ಸಾವಿರ ಕೋಟಿ ಆಗಿದೆ. ಕೇಂದ್ರದಿಂದ ಈ ವರ್ಷ 50 ಸಾವಿರ ಕೋಟಿ ಬರುತ್ತದೆ. ಕರ್ನಾಟಕದಿಂದ 4 ಲಕ್ಷ ಕೋಟಿ ತೆರಿಗೆ ಕಟ್ಟುತ್ತೇವೆ. ಆದರೂ ನಮಗೆ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕೇಂದ್ರದಿಂದ ಅನ್ಯಾಯವಾಗಿದೆ. ರಾಜ್ಯಕ್ಕೆ ಕೊಡಬೇಕಿದ್ದ ಸಹಾಯಧನ ಕೊಟ್ಟಿಲ್ಲ. 5495 ಕೋಟಿ ಹಣ ಕೇಂದ್ರದಿಂದ ಬರಬೇಕಿದೆ ಎಂದರು.
ಜಿ ಎಸ್ ಟಿ ಮೂಲಕ ಹೆಚ್ಚು ತೆರಿಗೆ ಕೇಂದ್ರಕ್ಕೆ ಹೋಗುತ್ತದೆ. ಆದರೂ ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. 25 ಸಂಸದರೂ ಕೇಂದ್ರದ ಬಳಿ ಜಿ ಎಸ್ ಟಿ ಹಣ ಕೇಳಿಲ್ಲ. ಬಸವರಾಜ್ ಬೊಮ್ಮಾಯಿ ಅವರು ಜಿ ಎಸ್ ಟಿ ಕೌನ್ಸಿಲ್ ಸದಸ್ಯರಾಗಿದ್ದರು. ಆದರೂ ಈ ಬಗ್ಗೆ ಕೇಳಿಲ್ಲ ಕಟ್ಟುನಿಟ್ಟಾಗಿ ಆದಾಯ ತೆರಿಗೆ ವಸೂಲಿ ಮಾಡಿದರೆ ರಾಜ್ಯದ ಆದಾಯ ಹೆಚ್ಚಳವಾಗುತ್ತದೆ ಎಂದರು.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಗ ಕೇವಲ 53 ಲಕ್ಷ ಕೋಟಿ ಸಾಲ ಇತ್ತು. ಈಗ 155 ಲಕ್ಷ ಕೋಟಿ ಸಾಲವಾಗಿದೆ. ದೇಶವನ್ನು ಕೇಂದ್ರ ಸರ್ಕಾರ ಸಾಲಕ್ಕೆ ದೂಡಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಆರ್ಥಿಕವಾಗಿ ದಿವಾಳಿಯಾಗದಂತೆ ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ. ಮೊದಲ ಸಂಪುಟದಲ್ಲಿ 5 ಗ್ಯಾರಂಟಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ ತಿಂಗಳಿಗೆ 200 ಯುನಿಟ್ ವಿದ್ಯುತ್ ಉಚಿತ ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ. ಇದರಿಂದ 1200 ಕೋಟಿ ರೂಪಾಯಿ ತಿಂಗಳ ವೆಚ್ಚವಾಗಲಿದೆ ಎಂದರು.
ಗೃಹಲಕ್ಷ್ಮೀ ಯೋಜನೆಯಡಿ ಮನೆಯೊಡತಿಗೆ ತಿಂಗಳಿಗೆ 2000 ರೂಪಾಯಿ, ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬರಿಗೆ 10 ಕೆಜಿ ಉಚಿತ ಅಕ್ಕಿ ವಿತರಿಸಲಾಗುವುದು. ಸರ್ಕಾರಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ. ಇದು ಕರ್ನಾಟಕ ಮಹಿಳೆಯರಿಗೆ ಮಾತ್ರ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
ಈ ವರ್ಷದಿಂದ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3000 ರೂಪಾಯಿ ನೀಡಲಾಗುವುದು ಎಂದು ತಿಳಿಸಿದರು.