ಬೆಂಗಳೂರು: ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಶನಿವಾರ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಿಗದಿಯಾಗಿದ್ದು, ಈ ಪ್ರದೇಶದಲ್ಲಿರುವ ಸಿಇಟಿ ಪರೀಕ್ಷಾ ಕೇಂದ್ರಗಳಿಗೆ ತೆರಳುವ ಅಭ್ಯರ್ಥಿಗಳು ಮುಂಚಿತವಾಗಿಯೇ ಪರೀಕ್ಷಾ ಕೇಂದ್ರ ತಲುಪುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ಸೂಚನೆ ನೀಡಿದ್ದಾರೆ.
ಕಂಠೀರವ ಕ್ರೀಡಾಂಗಣ ಸಮೀಪವಿರುವ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಬೆಳಗ್ಗೆ 8:30ರ ಹೊತ್ತಿಗೆ ಪರೀಕ್ಷಾ ಕೇಂದ್ರಗಳಿಗೆ ತಲುಪಬೇಕು. ಮಧ್ಯಾಹ್ನ ನಡೆಯುವ ಗಣಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕೂಡ ಬೆಳಿಗ್ಗೆಯೇ ಪರೀಕ್ಷಾ ಕೇಂದ್ರ ತಲುಪಲು ಸೂಚಿಸಲಾಗಿದೆ.
ಪ್ರಮಾಣವಚನ ನಡೆಯಲಿರುವುದರಿಂದ ಕಂಠೀರವ ಸ್ಟೇಡಿಯಂ ಸಂಪರ್ಕಿಸುವ ಮಾರ್ಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತೊಂದರೆಗೆ ಒಳಗಾಗದಂತೆ ಬೇಗನೆ ಪರೀಕ್ಷಾ ಕೇಂದ್ರಕ್ಕೆ ತಲುಪಬೇಕು. ಸಂಚಾರ ಸಮಸ್ಯೆಯಲ್ಲಿ ಸಿಲುಕಿದ ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರವನ್ನು ಪೊಲೀಸರಿಗೆ ತೋರಿಸಿದಲ್ಲಿ ಆದಷ್ಟು ಬೇಗನೆ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ವ್ಯವಸ್ಥೆ ಮಾಡಿಕೊಡಲಾಗುವುದು.