ಮಾಜಿ ಎನ್ ಸಿ ಬಿ ಅಧಿಕಾರಿ ಸಮೀರ್ ವಾಂಖೆಡೆ ಅವರಿಗೆ ಕೇಂದ್ರ ತನಿಖಾ ದಳ (ಸಿಬಿಐ) ನೋಟಿಸ್ ನೀಡಿದೆ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಕಚೇರಿಗೆ ವಿಚಾರಣೆಗೆ ಬರುವಂತೆ ಹೇಳಿದೆ.
ಮುಂಬೈ ವಲಯದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮುಖ್ಯಸ್ಥರಾಗಿದ್ದ ಸಮೀರ್ ವಾಂಖೆಡೆ ಎರಡು ವರ್ಷಗಳ ಹಿಂದೆ ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸಿದ್ದರು.
ಈ ಪ್ರಕರಣದಲ್ಲಿ ಸಮೀರ್ ವಾಂಖೆಡೆ ಮತ್ತು ಇತರರು ಆರ್ಯನ್ ಖಾನ್ ಅವರನ್ನು ಸಿಲುಕಿಸದಿರಲು 25 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ. ಅದಕ್ಕಾಗಿ ಮುಂಗಡ 50 ಲಕ್ಷ ರೂಪಾಯಿ ಲಂಚ ಪಡೆದಿದ್ದರು ಎನ್ನಲಾಗಿದೆ.
2021 ರಲ್ಲಿ ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನ ಮೇಲೆ ದಾಳಿ ಮಾಡಿದ ಎನ್ ಸಿ ಬಿ ಟೀಂ ಆರ್ಯನ್ ಖಾನ್ ರನ್ನು ಪ್ರಕರಣದಲ್ಲಿ ಹೆಸರಿಸಿತ್ತು. ಆದರೆ ನಂತರ ಅವರನ್ನು ಪ್ರಕರಣದಿಂದ ಕೈಬಿಡಲಾಗಿತ್ತು.
ನಾಲ್ಕು ವಾರಗಳ ಕಾಲ ಜೈಲಿನಲ್ಲಿ ಕಳೆದಿದ್ದ ಆರ್ಯನ್ ಖಾನ್ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 2022ರ ಮೇ ತಿಂಗಳಲ್ಲಿ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿತು.
ಡ್ರಗ್ಸ್ ವಿರೋಧಿ ಏಜೆನ್ಸಿ ಸ್ಥಾಪಿಸಿದ ವಿಶೇಷ ತನಿಖಾ ತಂಡ (ಎಸ್‌ಐಟಿ) ವಾಂಖೆಡೆ ನೇತೃತ್ವದ ತನಿಖೆಯು ಲೋಪವಾಗಿದೆ ಎಂದು ಹೇಳಿಕೊಂಡಿದೆ.
ಸಮೀರ್ ವಾಂಖೆಡೆ ಅವರನ್ನು ಕಳೆದ ವರ್ಷ ಮೇ ತಿಂಗಳಲ್ಲಿ ಚೆನ್ನೈನಲ್ಲಿರುವ ತೆರಿಗೆದಾರರ ಸೇವೆಗಳ ನಿರ್ದೇಶನಾಲಯಕ್ಕೆ ವರ್ಗಾಯಿಸಲಾಯಿತು.