ಬೆಂಗಳೂರು: ಪಡಿತರ ಚೀಟಿ ಪಡೆಯಲು ಕಳೆದ ಎರಡು ಮೂರು ವರ್ಷಗಳಿಂದ ಅರ್ಜಿ ಸಲ್ಲಿಸಿದ ಲಕ್ಷಾಂತರ ಮಂದಿಗೆ ಇದುವರೆಗೂ ರೇಷನ್ ಕಾರ್ಡ್ ಸಿಕ್ಕಿಲ್ಲ. ಆಹಾರ ಇಲಾಖೆಯ ಮಾಹಿತಿಯಂತೆ 2.87 ಲಕ್ಷ ಬಿಪಿಎಲ್, 46,576 ಎಪಿಎಲ್ ಸೇರಿದಂತೆ ಒಟ್ಟು 3.34 ಲಕ್ಷ ಪಡಿತರ ಚೀಟಿಗಳು ವಿಲೇವಾರಿಗೆ ಬಾಕಿ ಇವೆ.
ಮೂರು ವರ್ಷಗಳಿಂದ ಅರ್ಜಿ ಸಲ್ಲಿಸಿ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ಕಾದು ಕುಳಿತಿದ್ದಾರೆ. ಆಹಾರ ಇಲಾಖೆ ವಿಳಂಬ ಧೋರಣೆಗೆ ಅರ್ಜಿದಾರರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಪಡಿತರ ಚೀಟಿ ಇಲ್ಲದೆ ಅಕ್ಕಿ ಸಿಗುತ್ತಿಲ್ಲ. ರೇಷನ್ ಕಾರ್ಡ್ ಇಲ್ಲದ ಕಾರಣ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ 2.87 ಬಿಪಿಎಲ್ ಮತ್ತು 46,576 ಎಪಿಎಲ್ ಕಾರ್ಡ್ ಗಳಿಗೆ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿ ಮಾಡಿಲ್ಲ.
ಆಹಾರ ಇಲಾಖೆ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ ಅರ್ಜಿದಾರರ ಮನೆ ಪರಿಶೀಲಿಸಿ ಕೆಲವು ಅರ್ಜಿಗಳನ್ನು ಮಾನ್ಯ ಮಾಡಿದೆ. ಮತ್ತೆ ಕೆಲವು ಅರ್ಜಿಗಳನ್ನು ತಿರಸ್ಕರಿಸಿದ್ದು, ಉಳಿದ ಅರ್ಜಿಗಳನ್ನು ವಿಲೇವಾರಿ ಮಾಡಿದೆ. ಇನ್ನು 2.87 ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ. ಬಿಪಿಎಲ್ ಅಥವಾ ಎಪಿಎಲ್ ಯಾವುದಾದರೂ ಒಂದು ಕಾರ್ಡ್ ಇದ್ದರೆ ಪಡಿತರ ಸೇರಿ ಇತರೆ ಸೌಲಭ್ಯ ಪಡೆದುಕೊಳ್ಳಲು ಅನುಕೂಲವಾಗುತ್ತದೆ. ಆದರೆ, ರೇಷನ್ ಕಾರ್ಡ್ ವಿತರಣೆಗೆ ಗ್ರಹಣ ಬಡಿದಿರುವುದರಿಂದ ತೊಂದರೆ ಆಗಿದೆ ಎಂದು ಹೇಳಲಾಗಿದೆ.