ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸಲು ಪ್ರಸ್ತುತ 3 ಮಾರ್ಗಗಳಿದ್ದು ಪ್ರಯಾಣಕ್ಕೆ ಸದ್ಯ 7.5 ಗಂಟೆ ಸಮಯ ಬೇಕಾಗುತ್ತದೆ. ಆದರೆ ಇನ್ಮುಂದೆ ಇನ್ನೂ ಕಡಿಮೆ ಅವಧಿಯಲ್ಲಿ ಪ್ರಯಾಣ ಮಾಡಬಹುದಾಗಿದೆ. ಎರಡು ನಗರಗಳ ನಡುವೆ ಸರಿಸುಮಾರು 350 ಕಿಲೋಮೀಟರ್ ದೂರವನ್ನು ಕ್ರಮಿಸಲು ಇನ್ಮುಂದೆ ಕೇವಲ 2.5 ಗಂಟೆ ಸಾಕು. NHAI ಈ ಎರಡು ವಾಣಿಜ್ಯ ಕೇಂದ್ರಗಳನ್ನು ಹೊಸ ಎಕ್ಸ್ ಪ್ರೆಸ್ ವೇಯೊಂದಿಗೆ ಸಂಪರ್ಕಿಸಲು ಮುಂದಾಗಿದೆ.
ಹಾಗಾಗಿ ಈ ಹೊಸ ಹೈಸ್ಪೀಡ್ ಕಾರಿಡಾರ್ ಆರ್ಥಿಕತೆಯನ್ನು ಗಣನೀಯವಾಗಿ ಹೆಚ್ಚಿಸುವ ನಿರೀಕ್ಷೆಯಿದೆ. ಅಲ್ಲದೆ ಈ ಹೊಸ ಎಕ್ಸ್ ಪ್ರೆಸ್‌ವೇ ದಾರಿಯುದ್ದಕ್ಕೂ ಶ್ರೇಣಿ-3 ನಗರಗಳನ್ನು ಅಭಿವೃದ್ಧಿಪಡಿಸುವ ನಿರೀಕ್ಷೆಯಿದೆ. ಈ ಹೊಸ ಎಕ್ಸ್ ಪ್ರೆಸ್‌ವೇ ಎನ್‌ಎಚ್‌ಎಐ ನಿರ್ಮಿಸುತ್ತಿರುವ 26 ಹೊಸ ಹಸಿರು ಎಕ್ಸ್ ಪ್ರೆಸ್‌ವೇಗಳಲ್ಲಿ ಒಂದಾಗಿದೆ . ಈ ಎಕ್ಸ್ ಪ್ರೆಸ್‌ವೇಗೆ ಮೇ 2022 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಡಿಪಾಯ ಹಾಕಿದ್ದರು.
ಈ ಹೊಸ ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್‌ವೇ ಸರ್ಕಾರಕ್ಕೆ 16,700 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ . ಹೊಸ ಎಕ್ಸ್ ಪ್ರೆಸ್ ವೇ ತಮಿಳುನಾಡಿನ ರಾಣಿಪೇಟ್, ಆಂಧ್ರಪ್ರದೇಶದ ಪಲಮನೇರ್ ಮತ್ತು ಚಿತ್ತೂರು ಮತ್ತು ಕರ್ನಾಟಕದ ಹೊಸಕೋಟೆ, ಮಾಲೂರು, ಬಂಗಾರಪೇಟೆ ಮತ್ತು ಕೋಲಾರ ಗೋಲ್ಡ್ ಫೀಲ್ಡ್ಸ್ (ಕೆಜಿಎಫ್) ನಗರಗಳನ್ನು ಸಂಪರ್ಕಿಸುತ್ತದೆ.
ಅದರ ಜೊತೆಗೆ ಈ ಹೊಸ ಎಕ್ಸ್ ಪ್ರೆಸ್‌ವೇ 262 ಕಿಲೋಮೀಟರ್ ಉದ್ದವಿರಲಿದೆ. ಅದರಲ್ಲಿ 106 ಕಿಲೋಮೀಟರ್ ಕರ್ನಾಟಕದಲ್ಲಿದ್ದರೆ, 71 ಕಿಲೋಮೀಟರ್ ಆಂಧ್ರಪ್ರದೇಶದಲ್ಲಿ ಮತ್ತು 85 ಕಿಲೋಮೀಟರ್ ತಮಿಳುನಾಡಿನಲ್ಲಿರಲಿದೆ.
NHAI ಪ್ರಕಾರ ಯೋಜನೆಯನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದೆ. ಆದರೆ ಪ್ರಸ್ತುತ ಯೋಜನೆಯ ಪ್ರಕಾರ ಕೆಲಸವು ನಿಧಾನವಾಗಿ ಪ್ರಗತಿಯಲ್ಲಿದೆ. ಹಾಗಾಗಿ ಮುಂದಿನ ವರ್ಷಾಂತ್ಯದೊಳಗೆ ಎಕ್ಸ್ ಪ್ರೆಸ್‌ವೇ ತೆರೆಯುವ ಸಾಧ್ಯತೆ ಹೆಚ್ಚು. ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್‌ವೇಯನ್ನು ಗಂಟೆಗೆ 120 ಕಿಮೀ ವೇಗಕ್ಕೆ ವಿನ್ಯಾಸಗೊಳಿಸಲಾಗಿದೆ ಮತ್ತು ಆಟೋರಿಕ್ಷಾಗಳು ಮತ್ತು ಮೋಟಾರ್‌ಸೈಕಲ್‌ಗಳಂತಹ ನಿಧಾನವಾಗಿ ಚಲಿಸುವ ವಾಹನಗಳನ್ನು ಹೈ-ಸ್ಪೀಡ್ ಕಾರಿಡಾರ್‌ಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.