ಅನಂತಪುರಂ: ಆಂದ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ತಿರುಮಲದಿಂದ ತಾಡಿಪತ್ರಿಗೆ ತೆರಳುತ್ತಿದ್ದ ತೂಫಾನ್ ವಾಹನವು ಕೊಂಡಾಪುರಂ ಮಂಡಲದ ಏಟೂರು ಚಿತ್ರಾವತಿ ಸೇತುವೆ ಬಳಿ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.
ಈ ಅಪಘಾತದಲ್ಲಿ ಏಳು ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಅನಂತಪುರಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಮೃತರನ್ನು ತಾಡಿಪತ್ರಿ ನಿವಾಸಿಗಳು ಎಂದು ಗುರುತಿಸಲಾಗಿದೆ. ಅಪಘಾತದ ವೇಳೆ ವಾಹನದಲ್ಲಿ 11 ಮಂದಿ ಪ್ರಯಾಣಿಕರಿದ್ದರು. ತಿರುಪತಿಗೆ ಹೋಗಿ ತಮ್ಮ ಊರಿಗೆ ಹಿಂತಿರುಗುತ್ತಿದ್ದಾಗ ದುರಂತ ಸಂಭವಿಸಿದೆ. ಈ ರಸ್ತೆ ಅಪಘಾತದ ಸಂಪೂರ್ಣ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.