
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶನಿವಾರ ಭರ್ಜರಿ ಗೆಲುವಿನ ನಂತರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ವೇದಿಕೆಯಲ್ಲಿ ಪಕ್ಷದ ನಾಯಕರು ನಂದಿನಿ ಸಿಹಿ ಹಂಚಿ ಸಂಭ್ರಮಿಸುವ ಮೂಲಕ ಎದುರಾಳಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಕೆ.ಸಿ. ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರಿದ್ದ ವೇದಿಕೆಯಲ್ಲಿ ಸುರ್ಜೇವಾಲಾ ಪಕ್ಷದ ನಾಯಕರಿಗೆ ನಂದಿನಿ ಸಿಹಿ ತಿನ್ನಿಸುವುದರ ಮೂಲಕ ಗೆಲುವನ್ನ ಸಂಭ್ರಮಿಸಿದರು.
ಕರ್ನಾಟಕದಲ್ಲಿ ಭರ್ಜರಿ ಗೆಲುವಿನ ಸಂಭ್ರಮಾಚರಣೆಗೆ ಕಾಂಗ್ರೆಸ್ ನಂದಿನಿ ಸಿಹಿತಿಂಡಿಗಳನ್ನು ಆಯ್ಕೆ ಮಾಡಿ ಸಂದೇಶ ರವಾನಿಸಿತು.
ನಂದಿನಿ ಇಲ್ಲದೆ ಕರ್ನಾಟಕದಲ್ಲಿ ಯಾವುದೂ ಪೂರ್ಣವಾಗುವುದಿಲ್ಲ ಎಂಬುದು ನಮಗೆ ಗೊತ್ತು. ನಂದಿನಿ ಈಗ ಎಲ್ಲ ಕನ್ನಡಿಗರೊಂದಿಗಿದೆ ಎಂದು ಪಕ್ಷದ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಪಕ್ಷದ ಮುಖ್ಯಸ್ಥ ಖರ್ಗೆ ಅವರನ್ನ ಇತರ ನಾಯಕರಿಗೆ ನಂದಿನಿ ಸಿಹಿ ವಿತರಿಸಲು ಆಹ್ವಾನಿಸುವ ಮೊದಲು ಮೈಕ್‌ನಲ್ಲಿ ಘೋಷಿಸಿದರು.
ಶನಿವಾರ ರಾತ್ರಿ ಕಾಂಗ್ರೆಸ್‌ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಇದೇ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದೆ.
ಕರ್ನಾಟಕದಲ್ಲಿ ನಂದಿನಿ ಉತ್ಪನ್ನಗಳ ಬದಲು ಗುಜರಾತ್ ಮೂಲದ ಅಮೂಲ್ ಬಳಕೆ ಹೆಚ್ಚು ಮಾಡಲು ಬಿಜೆಪಿ ಸರ್ಕಾರ ಷಡ್ಯಂತ್ರ ನಡೆಸಿದೆ ಎಂದು ಚುನಾವಣೆಗೂ ಮುನ್ನ ಕಾಂಗ್ರೆಸ್ ದೊಡ್ಡ ಆರೋಪ ಮಾಡಿತ್ತು.