ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ನಾಯಕನಹಟ್ಟಿ ಹೋಬಳಿಯ ಭೀಮಗೊಂಡನಹಳ್ಳಿ ಗ್ರಾಮದಲ್ಲಿ ಕಣ್ಣಿಗೆ ಖಾರದ ಪುಡಿ ಎರಚಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಲಾಗಿದೆ.
ಗೌಡಗೆರೆ ಗ್ರಾಪಂ ಅಧ್ಯಕ್ಷ ಜಿ.ಒ. ಓಬಳೇಶ್ ಹಲ್ಲೆಗೊಳಗಾದವರು. ಭೀಮಗೊಂಡನಹಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಅಬಕಾರಿ ಇಲಾಖೆ ಸಿಬ್ಬಂದಿ ಬುಧವಾರ ದಾಳಿ ನಡೆಸಿ ಮದ್ಯ ವಶಕ್ಕೆ ಪಡೆದಿದ್ದರು. ಇದನ್ನು ಓಬಳೇಶ್ ಅವರೇ ಹೇಳಿ ಮಾಡಿಸಿರುವುದಾಗಿ ಆರೋಪಿಸಿ ಕೆಲವು ಕಿಡಿಗೇಡಿಗಳು ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಬೈಕ್ ನಲ್ಲಿ ತೆರಳುವ ವೇಳೆ ಏಕಾಏಕಿ ಮುಖಕ್ಕೆ ಖಾರದಪುಡಿ ಎರಚಿದ ನಾಲ್ಕೈದು ಜನ ಹಲ್ಲೆ ನಡೆಸಿದ್ದಾರೆ. ಸ್ಥಳೀಯರು ಅವರನ್ನು ನಾಯಕನಹಟ್ಟಿ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾಪತ್ರೆಗೆ ದಾಖಲಿಸಲಾಗಿದೆ. ನಾಯಕನಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.