ಚಿಕಿತ್ಸೆಗಾಗಿ ಕರೆತಂದಿದ್ದ ವ್ಯಕ್ತಿಯೊಬ್ಬ ಯುವ ವೈದ್ಯೆಯನ್ನ ಇರಿದು ಹತ್ಯೆ ಮಾಡಿದ ಬಳಿಕ ಕೇರಳದಲ್ಲಿ ವೈದ್ಯರು ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ವೈದ್ಯೆಯನ್ನು ಚಿಕಿತ್ಸೆಗಾಗಿ ಕರೆತಂದಿದ್ದ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಕೊಂದಿದ್ದ.
ಮೇ. 10 ರ ಬುಧವಾರ ಮುಂಜಾನೆ ಸಂಭವಿಸಿದ ಘಟನೆಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ. ಕೊಲ್ಲಂ ಜಿಲ್ಲೆಯ 42 ವರ್ಷದ ಶಾಲಾ ಶಿಕ್ಷಕನಾಗಿರುವ ಆರೋಪಿ ಸಂದೀಪ್ ಮಾದಕ ವಸ್ತು ಸೇವನೆಯಿಂದ ಡಿ-ಅಡಿಕ್ಷನ್ ಥೆರಪಿಗೆ ಒಳಗಾಗಿದ್ದರು. ಅವರನ್ನು ಆಸ್ಪತ್ರೆಗೆ ಕರೆತಂದಿದ್ದಾಗ ದುರಂತ ಘಟನೆ ನಡೆದಿದೆ. ಕೊಟ್ಟಾಯಂ ಮೂಲದ ಡಾ. ವಂದನಾ ದಾಸ್ ಕುತ್ತಿಗೆ, ತಲೆ ಮತ್ತು ಬೆನ್ನುಮೂಳೆಗೆ ಗಾಯಗಳಾಗಿ ಸಾವನ್ನಪ್ಪಿದ್ದಾರೆ. ವಂದನಾ ಕೊಲ್ಲಂ ಅಜೀಜಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ & ರಿಸರ್ಚ್‌ನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದರು. ತಾಲೂಕು ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದರು. ವಂದನಾ ಅವರನ್ನು ತಕ್ಷಣ ತಿರುವನಂತಪುರಂನ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಸಾವನ್ನಪ್ಪಿದ್ದರು. ದಾಳಿಕೋರ ಸಂದೀಪ್ ಯುವ ವೈದ್ಯೆಯ ಮೇಲೆ ಶಸ್ತ್ರಚಿಕಿತ್ಸಾ ಕತ್ತರಿ ಬಳಸಿ ದಾಳಿ ನಡೆಸಿದ್ದ.
ಘಟನೆ ವಿರೋಧಿಸಿ ಕೇರಳ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ (ಕೆಜಿಎಂಒಎ) ರಾಜ್ಯಾದ್ಯಂತ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ದು, ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕೂಡ ರಾಜ್ಯದಲ್ಲಿ 24 ಗಂಟೆಗಳ ಪ್ರತಿಭಟನೆ ಮತ್ತು ಮುಷ್ಕರಕ್ಕೆ ಕರೆ ನೀಡಿದೆ.