ನವದೆಹಲಿ: ಉದ್ಯೋಗದಾತರು ತಪ್ಪಿಗೆ ಉದ್ಯೋಗಿಗೆ ಪಿಂಚಣಿ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಉದ್ಯೋಗದಾತರು ತಪ್ಪಾಗಿ ಹಣ ಕಡಿತ ಮಾಡಿ ಅದಕ್ಕೆ ಉದ್ಯೋಗಿಯನ್ನೇ ಹೊಣೆ ಮಾಡುವುದು, ಉದ್ಯೋಗಿಗೆ ಪಿಂಚಣಿ ನಿರಾಕರಿಸುವುದು ಸರಿಯಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಉದ್ಯೋಗಿಯ ವೇತನದಿಂದ ತಪ್ಪಾಗಿ ಹಣ ಕಡಿತ ಮಾಡಿದ, ಆತನನ್ನು ಸಿಪಿಎಫ್ ಯೋಜನೆಯ ಸದಸ್ಯ ಎಂದು ಪರಿಗಣಿಸಿದ ಮಾತ್ರಕ್ಕೆ ಉದ್ಯೋಗಿಯಿಂದ ಪಿಂಚಣಿಯ ಹಕ್ಕು ಕಸಿಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಅಭಯ್ ಎಸ್.0 ಓಕಾ, ರಾಜೇಶ್ ಬಿಂದಾಲ್ ಅವರನ್ನು ಒಳಗೊಂಡ ದ್ವಿಸದಸ್ಯ ನ್ಯಾಯಪೀಠ ಹೇಳಿದೆ. ಕಲ್ಕತ್ತಾ ಸಾರಿಗೆ ನಿಗಮ ಮತ್ತು ಇತರರು ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಪೀಠ ವಜಾಗೊಳಿಸಿದೆ.
ಅರ್ಜಿದಾರ ಆಶಿತ್ ಚಕ್ರವರ್ತಿ ಮತ್ತು ಇತರರಿಗೆ ಪಿಂಚಣಿ ಹಣ ಬಿಡುಗಡೆ ಮಾಡುವಂತೆ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ಸಾರಿಗೆ ನಿಗಮಕ್ಕೆ ಆದೇಶಿಸಿತ್ತು. ಕಳೆದ ವರ್ಷ ಮಾರ್ಚ್ 5ರಂದು ವಿಭಾಗೀಯ ಪೀಠದಲ್ಲಿ ಈ ಕುರಿತ ವಿಚಾರಣೆ ನಡೆದು ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪು ಎತ್ತಿ ಹಿಡಿಯಲಾಗಿತ್ತು.
ತೀರ್ಪಿನ ವಿರುದ್ಧ ಸಾರಿಗೆ ನಿಗಮ ಮತ್ತು ಇತರರು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಭವಿಷ್ಯ ನಿಧಿಗಾಗಿ ಉದ್ಯೋಗಿ ವೇತನದಿಂದ ನಿಯಮಿತವಾಗಿ ಹಣ ಕಡಿತ ಮಾಡಲಾಗಿದ್ದು, ಈ ಬಗ್ಗೆ ಅವರಿಗೆ ಮಾಹಿತಿಯನ್ನು ನೀಡಲಾಗಿದೆ. ಅದಕ್ಕೆ ಅವರು ಆಕ್ಷೇಪಿಸಿಲ್ಲ. ನಿವೃತ್ತಿ ನಂತರ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪಿಂಚಣಿ ಪ್ರಯೋಜನ ಪಡೆಯಲು ಅವರಿಗೆ ಅವಕಾಶ ನೀಡಬಾರದು ಎಂದು ಮೇಲ್ಮನವಿಯಲ್ಲಿ ಕೋರಲಾಗಿತ್ತು.
ನಾನು ಪಿಂಚಣಿ ಯೋಜನೆ ಆಯ್ಕೆ ಮಾಡಿಕೊಂಡಿದ್ದು, ನನ್ನ ವೇತನ ಸರಿಯಾಗಿ ಲೆಕ್ಕ ಹಾಕಿ ಅದರ ಕಡಿತ ಮಾಡಬೇಕಿರುವುದು ನಿಗಮದ ಕರ್ತವ್ಯವಾಗಿದ್ದು, ನಿಗಮದ ತಪ್ಪಿಗೆ ನನಗೆ ಪಿಂಚಣಿ ನೀಡದಿರುವುದು ಸರಿಯಲ್ಲವೆಂದು ಆಶಿತ್ ಚಕ್ರವರ್ತಿ ಹೇಳಿದ್ದರು.