ರಾಜ್ಯ ವಿಧಾನಸಭಾ ಚುನಾವಣೆಗೆ ನಾಳೆ ಮತದಾನ ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ಈಗಾಗಲೇ ತೆರೆ ಬಿದ್ದಿದೆ. ಕ್ಷೇತ್ರದ ಮತದಾರರಲ್ಲದವರು, ಸ್ಟಾರ್ ಪ್ರಚಾರಕರು ಸೋಮವಾರ ಸಂಜೆಯೇ ಕ್ಷೇತ್ರಗಳನ್ನು ತೊರೆದಿದ್ದು, ನಾಳಿನ ಮತದಾನಕ್ಕೆ ವೇದಿಕೆ ಸಿದ್ಧವಾಗಿದೆ.
ಮನೆ ಮನೆ ಪ್ರಚಾರದಲ್ಲಿ ಅಭ್ಯರ್ಥಿಗಳು, ಕಾರ್ಯಕರ್ತರು ನಿರತರಾಗಿದ್ದು, ಇದರ ಜೊತೆಗೆ ತೆರೆ ಮರೆಯ ಕಸರತ್ತುಗಳು ಸಹ ನಡೆಯುತ್ತಿವೆ. ಈ ಎಲ್ಲದರ ನಡುವೆ ಬೆಟ್ಟಿಂಗ್ ದಂಧೆಯೂ ಬಲು ಜೋರಾಗಿದ್ದು, ತಮ್ಮ ತಮ್ಮ ನೆಚ್ಚಿನ ಅಭ್ಯರ್ಥಿಗಳ ಗೆಲುವಿನ ಕುರಿತು ಬಾಜಿ ನಡೆಯುತ್ತಿದೆ.
ಸಣ್ಣ ಪ್ರಮಾಣದ ಹಣದಿಂದ ಹಿಡಿದು ಬೈಕು, ಕಾರು, ಚಿನ್ನ, ಬೆಳ್ಳಿ, ಜಮೀನು, ಕುರಿ, ಮೇಕೆ, ಕೋಳಿ ಮೊದಲಾದವುಗಳನ್ನು ಪಣಕ್ಕೆ ಇಡುತ್ತಿದ್ದು, ಇನ್ನು ವ್ಯವಸ್ಥಿತವಾಗಿ ಬೆಟ್ಟಿಂಗ್ ನಡೆಸಿರುವವರು ಒಂದಕ್ಕೆ ಮೂರ್ನಾಲ್ಕು ಪಟ್ಟು ಹಣ ನೀಡುವುದಾಗಿ ಹೇಳುವ ಮೂಲಕ ಹಣ ಕಟ್ಟಿಸಿಕೊಳ್ಳುತ್ತಿದ್ದಾರೆ. ಮೇ 13ರ ಫಲಿತಾಂಶದ ಬಳಿಕ ಯಾರ ಲಕ್ ಯಾವ ರೀತಿ ಇರಲಿದೆ ಎಂಬುದು ಬಹಿರಂಗವಾಗಲಿದೆ.