ತೀವ್ರವಾದ ದುರ್ವಾಸನೆ ತಾಳಲಾರದೆ ಆರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾದ ಘಟನೆ ಅಮೆರಿಕದ ಟೆಕ್ಸಾಸ್ ಶಾಲೆಯಲ್ಲಿ ನಡೆದಿದೆ. ಈ ದುರ್ವಾಸನೆಯನ್ನು ಮೊದಲಿಗೆ ಅನಿಲ ಸೋರಿಕೆ ಆಗಿರಬಹುದೆಂದು ಶಂಕಿಸಲಾಗಿತ್ತು. ಸ್ಥಳ ಪರಿಶೀಲನೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ತನಿಖೆ ನಡೆಸಿತು. ಈ ವೇಳೆ ಚೇಷ್ಟೆ ಮಾಡಲು ಈ ರೀತಿ ಮಾಡಿದ್ದಾಗಿ ಅಮೆರಿಕದ ಟೆಕ್ಸಾಸ್ ಶಾಲಾ ವಿದ್ಯಾರ್ಥಿಯೊಬ್ಬ ಒಪ್ಪಿಕೊಂಡಿದ್ದಾನೆ.
ವರದಿಯ ಪ್ರಕಾರ, ಕಳೆದ ಬುಧವಾರದಂದು ಒಮ್ಮಿಂದೊಮ್ಮೆಲೆ ವಿಚಿತ್ರವಾದ ವಾಸನೆ ಬರಲು ಶುರುವಾಗಿದೆ. ಅನಿಲ ಸೋರಿಕೆಯಂಥ ತೀವ್ರ ವಾಸನೆಗೆ ಆರು ವಿದ್ಯಾರ್ಥಿಗಳು ಅಸ್ವಸ್ಥರಾದರು. ಹೀಗಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಬೇರೆಡೆ ಸ್ಥಳಾಂತರಿಸಲಾಯಿತು. ಬಳಿಕ ಶಾಲಾ ಕಟ್ಟಡವನ್ನು ಅಗ್ನಿಶಾಮಕ ಮತ್ತು ರಕ್ಷಣಾ ವಿಭಾಗವು ಗ್ಯಾಸ್ ಪತ್ತೆ ಮಾಡುವ ಸಾಧನಗಳೊಂದಿಗೆ ಸಂಪೂರ್ಣವಾಗಿ ಪರಿಶೀಲಿಸಿದೆ. ಆದರೆ ಯಾವುದೇ ಸೋರಿಕೆ ಅಥವಾ ಬೆಂಕಿಯ ಲಕ್ಷಣಗಳು ಕಂಡುಬಂದಿಲ್ಲ. ದುರ್ವಾಸನೆಯ ಹೊರತಾಗಿಯೂ ವಿದ್ಯಾರ್ಥಿಗಳು ಮರುದಿನ ತರಗತಿಗೆ ಮರಳಿದರು.
ಅದೇ ದಿನ ದುರ್ವಾಸನೆಯಿಂದ ತೀವ್ರ ತಲೆನೋವು ಕಾಣಿಸಿಕೊಂಡು ಆರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿತು. ಮತ್ತು ಕನಿಷ್ಠ ಎಂಟು ಜನರು ಅನಾರೋಗ್ಯದಿಂದ ಬಳಲಿದ್ದು, ಅಧಿಕಾರಿಗಳನ್ನು ಚಿಂತೆಗೀಡು ಮಾಡಿತು. ಇದರ ಬೆನ್ನಲ್ಲೇ ಉಳಿದ ವಾರ ತರಗತಿಗಳು ಸ್ಥಗಿತಗೊಂಡಿದ್ದವು. ಕೊನೆಗೆ ವಿದ್ಯಾರ್ಥಿಯೊಬ್ಬ ಮುಂದೆ ಬಂದು ತಾನು ಕುಚೇಷ್ಟೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಹೆನ್ಸ್‌ಗಾಕ್ಟ್ ಫಾರ್ಟ್ ಸ್ಪ್ರೇ ಅನ್ನು ಬಳಸಿದ್ದಾನೆ. ಇದರಿಂದ ಶಾಲೆಯಲ್ಲಿ ವಿಚಿತ್ರ ವಾಸನೆ ಬರಲು ಕಾರಣವಾಗಿದೆ. ಕೊನೆಗೂ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳ ಭಯಕ್ಕೆ ತೆರೆ ಎಳೆಯುವ ಮೂಲಕ ನಿಗೂಢತೆ ಬಗೆಹರಿದಿದೆ.
ಈ ಘಟನೆಯು ಶಾಲೆಯ ಸುರಕ್ಷತೆ ಮತ್ತು ತೀವ್ರ ಪರಿಣಾಮಗಳನ್ನು ಉಂಟುಮಾಡುವ ಇಂತಹ ಕುಚೇಷ್ಟೆಗಳ ಬಳಕೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ವಿದ್ಯಾರ್ಥಿಯ ವಿರುದ್ಧ ಯಾವ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಶಾಲೆಯು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತದೆಯೇ ಎಂಬುದು ಇನ್ನೂ ತಿಳಿದಿಲ್ಲ.