ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣಾ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ಬೀಳಲಿದ್ದು, ಕ್ಷೇತ್ರದ ಮತದಾರರಲ್ಲದವರು, ಸ್ಟಾರ್ ಪ್ರಚಾರಕರು ಅಂತಹ ಕ್ಷೇತ್ರಗಳನ್ನು ಬಿಟ್ಟು ಹೊರ ಹೋಗಬೇಕಿದೆ. ಹೀಗಾಗಿಯೇ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಮೊದಲಾದವರು ಕೊನೆ ಕ್ಷಣದ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ಇಂದು ಸಂಜೆ 6 ಗಂಟೆ ಬಳಿಕ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದ್ದು, ಯಾವುದೇ ಅಭ್ಯರ್ಥಿ ಧ್ವನಿವರ್ಧಕ ಬಳಸಿ, ಸಮಾವೇಶ, ರೋಡ್ ಶೋಗಳ ಮೂಲಕ ಮತ ಯಾಚಿಸುವಂತಿಲ್ಲ. ಆದರೆ ಮನೆಮನೆಗಳಿಗೆ ತೆರಳಿ ಮೇ 10ರ ಮತದಾನದ ದಿನದವರೆಗೂ ಪ್ರಚಾರ ನಡೆಸಬಹುದಾಗಿದ್ದು, ಇದರ ಜೊತೆಗೆ ತೆರೆಮರೆಯ ಆಟವೂ ಶುರುವಾಗುತ್ತದೆ. ಹಣ ಹಂಚಿಕೆ ಜೊತೆಗೆ ಗುಂಡು – ತುಂಡಿನ ಸಮಾರಾಧನೆಯೂ ನಡೆಯಲಿದ್ದು, ಇದರ ನಿಯಂತ್ರಣಕ್ಕೆ ಚುನಾವಣಾ ಆಯೋಗ ಹದ್ದಿನ ಕಣ್ಣೀರಿಸಿದೆ.
ಇಷ್ಟಾದರೂ ಸಹ ಗೆಲುವಿಗಾಗಿ ಹರಸಾಹಸ ನಡೆಸುತ್ತಿರುವ ಹಲವು ಅಭ್ಯರ್ಥಿಗಳು ಈಗಾಗಲೇ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಚುನಾವಣಾ ಅಧಿಕಾರಿಗಳ ಕಣ್ಣು ತಪ್ಪಿಸಿ ಹಣ, ಉಡುಗೊರೆ ಹಂಚಿಕೆ ಮಾಡಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಎಲ್ಲ ಪಕ್ಷಗಳ ಕಾರ್ಯಕರ್ತರು ಸಹ ಎದುರಾಳಿಯ ಮೇಲೆ ಸದಾ ಒಂದು ಕಣ್ಣು ಇಟ್ಟಿರುವ ಕಾರಣ ಇಂದು ರಾತ್ರಿ ಹಾಗೂ ನಾಳೆಯೊಳಗಾಗಿ ಕೋಟ್ಯಾಂತರ ರೂಪಾಯಿ ನಗದು, ಮದ್ಯ ಹಾಗೂ ಉಡುಗೊರೆ ವಸ್ತುಗಳು ಜಪ್ತಿಯಾಗುವ ಸಾಧ್ಯತೆ ಇದೆ.