ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ವಿಮಾನಯಾನ ಸಂಸ್ಥೆಗಳ ಎಡವಟ್ಟಿನದ್ದೇ ಸುದ್ದಿ. ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿಸಿದ ಘಟನೆಯಿಂದ ಹಿಡಿದು ವಿಮಾನದಲ್ಲಿ ವಿತರಿಸಲಾದ ಆಹಾರದಲ್ಲಿ ಲೋಪದ ತನಕ ಹಲವು ವಿಷಯಗಳು ವರದಿಯಾಗಿದ್ದವು.
ಇದೀಗ ಕೊಂಚ ಭಿನ್ನ ಸುದ್ದಿ ಅಮೇರಿಕಾದಲ್ಲಿ ನಡೆದಿದೆ. ತನ್ನ ತವರೂರಿಗೆ ತೆರಳಲು ದೇಶಿಯ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ್ದ ಮಹಿಳೆಯೊಬ್ಬರನ್ನು ವಿದೇಶಕ್ಕೆ ಕರೆದೊಯ್ದಿದ್ದು, ಇದರ ಅರಿವಿಲ್ಲದೆ ಪಾಸ್ಪೋರ್ಟ್ ಸಹ ತೆಗೆದುಕೊಂಡು ಹೋಗದ ಆಕೆ ಫಜೀತಿ ಅನುಭವಿಸಿದ್ದಾರೆ.
ನ್ಯೂಜೆರ್ಸಿಯ ಎಲೀಸ್ ಬೆಬಾರ್ಡ್ ಎಂಬವರು ತಮ್ಮ ತವರೂರು ಜಾಕ್ಸನ್ ವಿಲ್ಲೆಗೆ ತೆರಳಲು ದೇಶಿಯ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ್ದರು. ಈ ಮೊದಲು ಕೂಡ ಹಲವು ಬಾರಿ ಅವರು ಇದೇ ವಿಮಾನದಲ್ಲಿ ಪ್ರಯಾಣಿಸಿದ್ದು, ಆದರೆ ಈ ಬಾರಿ ವಿಮಾನಯಾನ ಸಂಸ್ಥೆ ಯಾವುದೇ ಮಾಹಿತಿ ನೀಡದೆ ಪ್ರವೇಶ ದ್ವಾರವನ್ನು ಬದಲಾಯಿಸಿತ್ತು.
ಇದರ ಅರಿವಿರದ ಎಲೀಸ್ ತಮ್ಮ ಎಂದಿನ ಪ್ರವೇಶ ದ್ವಾರದ ಮೂಲಕ ವಿಮಾನ ಏರಿದ್ದು, ಹಾರಾಟದ ಸಂದರ್ಭದಲ್ಲಿ ಈ ವಿಮಾನ ಜಮೈಕಾಗೆ ತೆರಳುತ್ತಿದೆ ಎಂಬುದನ್ನು ತಿಳಿದು ಹೌಹಾರಿದ್ದಾರೆ. ಬಳಿಕ ವಿಮಾನ ಸಿಬ್ಬಂದಿಯ ಬಳಿ ಈ ವಿಚಾರವನ್ನು ತಿಳಿಸಿದ್ದು, ತಮ್ಮ ತಪ್ಪಿಗೆ ಕ್ಷಮೆ ಯಾಚಿಸಿದ ಸಿಬ್ಬಂದಿ ವಾಪಸ್ ತೆರಳಲು ಉಚಿತ ವಿಮಾನ ಟಿಕೆಟ್ ನೀಡಿದ್ದಾರೆ.