ಗುವಾಹಟಿ: ತಾವು ದತ್ತು ಪಡೆದ ನಾಲ್ಕು ವರ್ಷದ ಮಗುವನ್ನು ನಿಂದಿಸಿ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ವೈದ್ಯ ದಂಪತಿಯನ್ನು ಗುವಾಹಟಿ ನಗರ ಪೊಲೀಸರು ಬಂಧಿಸಿದ್ದಾರೆ.
ಮೇಘಾಲಯದ ರಿ-ಭೋಯ್ ಜಿಲ್ಲೆಯ ಮನೋವೈದ್ಯೆ ಸಂಗೀತಾ ದತ್ತಾ ಅವರನ್ನು ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ. ಆಕೆಯ ಪತಿ ಜನರಲ್ ಸರ್ಜನ್ ಆಗಿರುವ ಡಾ. ವಲ್ಲಿಯುಲ್ ಇಸ್ಲಾಂ ಅವರನ್ನು ಅಸ್ಸಾಂನ ರಾಜಧಾನಿ ನಗರದ ಅವರ ನಿವಾಸದಿಂದ ಬಂಧಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಪಾಲ್ಟನ್ ಬಜಾರ್ ಪೊಲೀಸ್ ಠಾಣೆಯಲ್ಲಿ ವೈದ್ಯ ದಂಪತಿಗಳ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳು ಮತ್ತು ಬಾಲಾಪರಾಧಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
4 ವರ್ಷದ ಅಪ್ರಾಪ್ತ ಬಾಲಕಿಯ ಕೈಗಳನ್ನು ಟೆರೇಸ್‌ನಲ್ಲಿ ಕಂಬಕ್ಕೆ ಕಟ್ಟಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದ್ದು, ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿದ್ದಾರೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಕೇಂದ್ರ) ನಂದಿನಿ ಕಾಕತಿ ತಿಳಿಸಿದ್ದಾರೆ.
ಮೊದಲಿಗೆ ವೈದ್ಯ ದಂಪತಿಗಳು ಹುಡುಗಿ ತಮ್ಮದೇ ಮಗು ಎಂದು ಹೇಳಿದರು, ಆದರೆ ತನಿಖೆಯ ಸಮಯದಲ್ಲಿ, ಅವಳು ಅವರ ಮಗು ಅಲ್ಲ. ಅವಳನ್ನು ದತ್ತು ಪಡೆದರು ಎಂದು ಗೊತ್ತಾಗಿದೆ. ನಾವು ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿದಾಗ, ನಮಗೆ ಹಲವಾರು ಗಾಯಗಳು ಕಂಡುಬಂದವು. ಮತ್ತು ಆಕೆಯ ದೇಹದ ಮೇಲೆ ಸುಟ್ಟ ಗಾಯದ ಗುರುತುಗಳಿವೆ. ಅಪ್ರಾಪ್ತ ಬಾಲಕಿಯು ತನಗೆ ದಂಪತಿಗಳು ಚಿತ್ರಹಿಂಸೆ ನೀಡಿದ್ದಾರೆ ಎಂದು ನಮಗೆ ತಿಳಿಸಿದ್ದಾಳೆ. ಆರೋಪಿ ದಂಪತಿಯನ್ನು ಬಂಧಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ನಂದಿನಿ ಕಾಕತಿ ಹೇಳಿದರು.