ಕಲಬುರ್ಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹತ್ಯೆಗೆ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಸಂಚು ರೂಪಿಸಿದ್ದಾನೆ. ಈ ಸಂಚಿನ ಹಿಂದೆ ಬಿಜೆಪಿ, ಆರ್ ಎಸ್ ಎಸ್ ನ ಕೆಲ ನಾಯಕರು ಇದ್ದಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಚಿತ್ತಾಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಮಾರಾಟ ಆಗಿದೆ. ಖರ್ಗೆ ಹತ್ಯೆಗೆ ಮಣಿಕಂಠ ರಾಠೋಡ್ ಸಂಚು ರೂಪಿಸಿದ್ದಾನೆ. ರೌಡಿ ಶೀಟರ್ ಗೆ ಟಿಕೆಟ್ ನೀಡಲಾಗಿದೆ. ಬಿಜೆಪಿಯವರು ಫೈಟರ್ ರವಿ, ಸೈಲೆಂಟ್ ಸುನೀಲ್ ಸೇರಿಸಿಕೊಂಡು ರೌಡಿ ಮೋರ್ಚಾ ರಚಿಸಿದ್ದಾರೆ. ಬಿಜೆಪಿಯವರು ರೌಡಿಗಳ ಜೊತೆ ರಾಮರಾಜ್ಯ ಕಟ್ಟಲು ಹೊರಟಿದ್ದಾರಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಣಿಕಂಠ ರಾಠೋಡ್ ಬೆದರಿಕೆ ಹಾಕಿರುವ ಆಡಿಯೋ ಬಗ್ಗೆ ತನಿಖೆ ನಡೆಸಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ. ಇದೇ ವೇಳೆ ಖರ್ಗೆ ಬೆಂಬಲಿಗರು, ಕಾರ್ಯಕರ್ತರ ಮನೆ ಮೇಲೆ ಐಟಿ ದಾಳಿ ನಡೆಸಿದ್ದಾರೆ. ಬಿಜೆಪಿಯವರು ಸೋಲುವ ಭೀತಿಯಿಂದ ತನಿಖಾ ಸಂಸ್ಥೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.