ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯೊಬ್ಬ ಜ್ಯೋತಿಷಿ ಸಲಹೆ ಮುಂದಿಟ್ಟುಕೊಂಡು ಮದುವೆ ಮತ್ತು ಹನಿಮೂನ್ ಗೆ 60 ದಿನಗಳ ಕಾಲ ಪೆರೋಲ್ ವಿಸ್ತರಣೆ ಪಡೆದುಕೊಂಡಿದ್ದಾನೆ.
ಹೈಕೋರ್ಟ್ ನಿಂದ ಪೆರೋಲ್ ಪಡೆದಿದ್ದ ವ್ಯಕ್ತಿಗೆ ಮತ್ತೆ 60 ದಿನ ಪೆರೋಲ್ ನೀಡಲಾಗಿದೆ. ಆಸ್ತಿ ಕಲಹ ಸಂಬಂಧ ವ್ಯಕ್ತಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಆರೋಪಿಗೆ ಈ ಹಿಂದೆ ಪೆರೋಲ್ ನೀಡಲಾಗಿತ್ತು. ಧಾರ್ಮಿಕ ಕಾರಣ ನೀಡಿ ಪೆರೋಲ್ ವಿಸ್ತರಿಸುವಂತೆ ಕೋರಿ ಕೈದಿ ಸಲ್ಲಿಸಿದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಪುರಸ್ಕರಿಸಿದೆ.
ಪ್ರಕರಣದಲ್ಲಿ ಅರ್ಜಿದಾರನಿಗೆ ಏಪ್ರಿಲ್ 5ರಿಂದ 20ರ ಸಂಜೆ 6 ಗಂಟೆಯವರೆಗೆ ಪೆರೋಲ್ ನೀಡಲಾಗಿತ್ತು. ಏಪ್ರಿಲ್ 11 ರಂದು ಆತ ರಿಜಿಸ್ಟರ್ ಮ್ಯಾರೇಜ್ ಆಗಿದ್ದು, 60 ದಿನ ಪೆರೋಲ್ ವಿಸ್ತರಿಸುವಂತೆ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾನೆ. ಪೆರೋಲ್ ಅವಧಿ ವಿಸ್ತರಿಸುವುದು ಸೂಕ್ತವಾಗಿದೆ. ಇದೇ ಮಾದರಿ ಕಾರಣ ನೀಡಿ ಮತ್ತೆ ಪೆರೋಲ್ ವಿಸ್ತರಣೆಗೆ ಅರ್ಜಿ ಸಲ್ಲಿಸಿದರೆ ಅದನ್ನು ಪುರಸ್ಕರಿಸಲಾಗುವುದಿಲ್ಲ. ಪ್ರತಿ ಭಾನುವಾರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯೊಳಗೆ ಸಂಬಂಧಿಸಿದ ಪೊಲೀಸ್ ಠಾಣೆಗೆ ಹಾಜರಾಗಬೇಕೆಂದು ಹೈಕೋರ್ಟ್ ಆದೇಶ ನೀಡಿದೆ.
ಹೈಕೋರ್ಟ್ ಪೆರೋಲ್ ನೀಡಿದ್ದರಿಂದ ಅರ್ಜಿದಾರ ಏಪ್ರಿಲ್ 11ರಂದು ಪ್ರೇಯಸಿಯನ್ನು ಮದುವೆಯಾಗಿದ್ದಾನೆ. ಹಿಂದೂ ಧರ್ಮದ ಸಂಪ್ರದಾಯ ಮತ್ತು ಆಚರಣೆ ಅನ್ವಯ ಜೂನ್ ಮೊದಲ ವಾರ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಲು ಅರ್ಜಿದಾರನ ಪತ್ನಿಯ ಪೋಷಕರು ನಿರ್ಧರಿಸಿದ್ದು, ಮದುವೆಯ ನಂತರ ಮಧುಚಂದ್ರ ಮತ್ತು ದೇವಸ್ಥಾನಗಳಿಗೆ ಭೇಟಿ ನೀಡಿ ಹಿಂದೂ ಸಂಪ್ರದಾಯದ ಇತರೆ ವಿಧಿ ವಿಧಾನ ನೆರವೇರಿಸಬೇಕಿದೆ. ಈ ಹಿಂದೆ ಮಂಜೂರು ಮಾಡಿದ ಪೆರೋಲ್ ಅವಧಿ ಏಪ್ರಿಲ್ 20ಕ್ಕೆ ಮುಕ್ತಾಯವಾಗಿದ್ದು, ಮತ್ತೆ 60 ದಿನ ಪೆರೋಲ್ ವಿಸ್ತರಿಸಬೇಕು ಎಂದು ಅರ್ಜಿದಾರರ ಪರ ವಕೀಲ ಡಿ. ಮೋಹನ್ ಕುಮಾರ್ ಮನವಿ ಮಾಡಿದ್ದರು. ಪೆರೋಲ್ ಅವಧಿ ಮುಗಿದ ನಂತರ ಕಾರಾಗೃಹದ ಅಧಿಕಾರಿಗಳ ಮುಂದೆ ಹಾಜರಾಗುತ್ತಾರೆ ಎಂದು ತಿಳಿಸಿದ್ದರು.
2015 ರ ಆಗಸ್ಟ್ 17ರಂದು ಕೋಲಾರದ ಅರ್ಜಿದಾರ ವ್ಯಕ್ತಿ ಒಬ್ಬನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ಘಟನೆ ನಡೆದಾಗ ಆತನಿಗೆ 21 ವರ್ಷವಾಗಿತ್ತು. 2019ರಲ್ಲಿ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದ್ದು ಮೇಲ್ಮನವಿಯಲ್ಲಿ ಹೈಕೋರ್ಟ್ ಶಿಕ್ಷೆಯ ಪ್ರಮಾಣವನ್ನು 10 ವರ್ಷಗಳಿಗೆ ಇಳಿಸಿದೆ. ಈಗಾಗಲೇ ಆರು ವರ್ಷ ಜೈಲು ಶಿಕ್ಷೆ ಪೂರ್ಣಗೊಂಡಿದ್ದು 4 ವರ್ಷ ಬಾಕಿ ಇದೆ. ಆತನಿಗೆ ಮದುವೆ, ಮಧುಚಂದ್ರಕ್ಕೆ ಪೆರೋಲ್ ನೀಡಲಾಗಿದೆ.