ತನ್ನ ಕಚೇರಿಯ ಮೇಲಧಿಕಾರಿಯನ್ನು ಹತ್ಯೆ ಮಾಡಿದ 13 ವರ್ಷಗಳ ನಂತರ ಕೊಲೆಗಾರ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರೋಪಿಗೀಗ 39 ವರ್ಷ ವಯಸ್ಸಾಗಿದ್ದು, ಅಪರಾಧಿಯ ಕೈಗೆ ಪೊಲೀಸರು ಕೋಳ ತೊಡಿಸಿದ್ದಾರೆ.
ಸೆಪ್ಟೆಂಬರ್ 15, 2010 ರಂದು ಕಾಶಿಮಿರಾ ಬಳಿಯ ಮುಂಬೈ-ಅಹಮದಾಬಾದ್ ಹೆದ್ದಾರಿಯ ಸಾಸು-ನವ್ಘರ್ ಪ್ರದೇಶದಲ್ಲಿ ಪಂಢರಿ ಶಾಮು ರಾಜ್ಭರ್ (25) ಎಂದು ಗುರುತಿಸಲಾದ ಮೃತದೇಹ ಪತ್ತೆಯಾಗಿತ್ತು. ಕೈಗಳನ್ನು ಕಟ್ಟಿಹಾಕಿದ ದೇಹವು ಕತ್ತು ಹಿಸುಕಿದ ಗುರುತುಗಳನ್ನು ಹೊಂದಿತ್ತು. ಸಂಜಯ್ ಗಾಮ ಭಾರದ್ವಾಜ್ ಎಂದು ಗುರುತಿಸಲಾದ ಆರೋಪಿ ವಿರುದ್ಧ ಮಾಣೆಕ್‌ಪುರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 302 (ಕೊಲೆ) ಮತ್ತು 201 (ಸಾಕ್ಷ್ಯ ಕಣ್ಮರೆಯಾಗಲು ಕಾರಣ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಆದರೆ, ಹತ್ಯೆ ಆರೋಪಿ 13 ವರ್ಷಕ್ಕೂ ಹೆಚ್ಚು ಕಾಲ ತಲೆಮರೆಸಿಕೊಂಡಿದ್ದ. ತನಿಖೆ ತೀವ್ರಗೊಳಿಸಿದ್ದ ಪೊಲೀಸರು ಹದ್ದಿನ ಕಣ್ಣಿಟ್ಟಿತ್ತು. ಉತ್ತರ ಪ್ರದೇಶ ಮತ್ತು ಮುಂಬೈನಲ್ಲಿ ಪದೇ ಪದೇ ಸ್ಥಳ ಬದಲಾಯಿಸುತ್ತಿದ್ದ ಆರೋಪಿಯನ್ನು ಕೊನೆಗೂ ಅಂಧೇರಿಯ ಚಕಾಲ ಎಂಬಲ್ಲಿ ಬಂಧಿಸಲಾಗಿದೆ.
ಆರೋಪಿಯು ಮೃತ ವ್ಯಕ್ತಿ ನಡೆಸುತ್ತಿದ್ದ ಫ್ಯಾಬ್ರಿಕೇಶನ್ ಕಂಪನಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. 5,000 ರೂ. ಮುಂಗಡ ಪಾವತಿಯನ್ನು ನಿರಾಕರಿಸಿದ್ದಕ್ಕಾಗಿ ಕೋಪಗೊಂಡ ಈತ ತನ್ನ ಬಾಸ್ ನನ್ನೇ ಮುಗಿಸಲು ಸಂಚು ರೂಪಿಸಿದ್ದ. ಮೇಲಧಿಕಾರಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಅಲ್ಲಿ ಕತ್ತು ಹಿಸುಕಿ ಕೊಂದಿದ್ದ. ಬಳಿಕ ಶವವನ್ನು ಯಾರಿಗೂ ಗೊತ್ತಾಗದಂತೆ ವಿಲೇವಾರಿ ಮಾಡಿದ್ದ. ಆರೋಪಿಯನ್ನು ಬಂಧಿಸಿರುವ ಪೊಲೀಸರು, ತನಿಖೆ ತೀವ್ರಗೊಳಿಸಿದ್ದಾರೆ.