ಮೈಸೂರು: ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಸಚಿವ ವಿ. ಸೋಮಣ್ಣ, ವರುಣಾದಲ್ಲಿ ನನ್ನ ಗೆಲ್ಲಿಸಿದರೆ ವಿಜಯನಗರ ಆಡಳಿತ ಮಾದರಿಯಲ್ಲಿ ಕ್ಷೇತ್ರ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದ್ದಾರೆ.
ವರುಣಾದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ವಿ. ಸೋಮಣ್ಣ, ಸಿದ್ದರಾಮಯ್ಯನವರೇ ವರುಣಾ ಕ್ಷೇತ್ರವಾಗಿ 15 ವರ್ಷಗಳಾಗಿವೆ. 10 ವರ್ಷ ನೀವು, ನಿಮ್ಮ ಮಗ ಯತೀಂದ್ರ 5 ವರ್ಷ ಶಾಸಕರಾಗಿದ್ದೀರಿ. ಆದರೂ 3 ತಾಲೂಕಿನಲ್ಲಿರುವ ಕ್ಷೇತ್ರವನ್ನು ಒಂದು ಮಾಡಲು ಆಗಿಲ್ಲ. 7 ಜಿಲ್ಲಾ ಪಂಚಾಯ್ತಿ ಜನರ ಬಳಿ ಎಂದಾದರೂ ಹೋಗಿದ್ದೀರಾ ? ಅವರ ಸಮಸ್ಯೆ ಏನು ಎಂದು ಎಂದಾದರೂ ಕೇಳಿದ್ದೀರಾ ? ನಿಮ್ಮನ್ನು ಸಿಎಂ ಮಾಡಿದ ಕ್ಷೇತ್ರದ ಜನರ ಋಣ ತೀರಿಸಿದ್ದೀರಾ ? ಎಂದು ಸಾಲು ಸಾಲು ಪ್ರಶ್ನೆ ಮಾಡಿದ್ದಾರೆ.
ವರುಣಾವನ್ನು ಛಿದ್ರ ಛಿದ್ರ ಮಾಡಿ ನೀವು ಮಾತ್ರ ಭದ್ರ ಕೋಟೆ ಕಟ್ಟಿಕೊಂಡಿದ್ದೀರಿ. 15 ವರ್ಷಗಳ ಕಾಲ ಕ್ಷೇತ್ರದ ಜನರು ಅವಕಾಶಕೊಟ್ಟರು ಆದರೂ ಯಾವೊಂದು ಅಭಿವೃದ್ಧಿ ಕೆಲಸವನ್ನೂ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ವರುಣಾ ಜನತೆ ನನಗೆ ಕೇವಲ 5 ವರ್ಷ ಅವಕಾಶ ಕೊಡಿ 15 ವರ್ಷಗಳಲ್ಲಿ ಮಾಡಲು ಸಾಧ್ಯವಾಗದೆ ಇರುವುದನ್ನು ಕೆಲ ವರ್ಷಗಳಲ್ಲಿ ಮಾಡಿ ತೋರಿಸುತ್ತೇನೆ. ಡಬಲ್ ಇಂಜಿನ್ ಸರ್ಕಾರ ಕ್ಷೇತ್ರದ ಜನರಿಗಾಗಿ 24 ಗಂಟೆಯೂ ಕೆಲಸ ಮಾಡಲಿದೆ ಎಂದು ಹೇಳಿದರು.