ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ದಿನ ಸಮೀಪಿಸುತ್ತಿದ್ದಂತೆಯೇ ಪ್ರಚಾರದ ಅಬ್ಬರ ಜೋರಾಗ ತೊಡಗಿದ್ದು, ಎದುರಾಳಿಗಳ ವಿರುದ್ಧ ರಾಜಕೀಯ ನಾಯಕರು ತೀವ್ರ ವಾಗ್ದಾಳಿ ಮುಂದುವರಿಸಿದ್ದಾರೆ.
ಶಿವಮೊಗ್ಗದಲ್ಲಿ ಭಾನುವಾರದಂದು ಆಯೋಜಿಸಿದ್ದ ಸಾಮರಸ್ಯ ಸಮಾವೇಶದಲ್ಲಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಪಕ್ಷ ತೊರೆದು ಜೆಡಿಎಸ್ ಸೇರ್ಪಡೆ ಬಳಿಕ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯಾಗಿರುವ ಆಯನೂರು ಮಂಜುನಾಥ್ ವಿರುದ್ಧ ಕಿಡಿ ಕಾರಿದ್ದಾರೆ.
ನದಿಯಲ್ಲಿ ಹರಿಯುವ ಶುದ್ಧ ನೀರು ಬಳಿಕ ಸಮುದ್ರಕ್ಕೆ ಸೇರಿಕೊಂಡು ಆವಿಯಾಗಿ ಮತ್ತೆ ಮಳೆಯಾಗಿ ಬರುತ್ತದೆ. ಆದರೆ ಕೊಳಚೆ ನೀರು ಅಲ್ಲಲ್ಲಿ ಕಟ್ಟಿಕೊಂಡು ಕಲುಷಿತ ವಾತಾವರಣ ಸೃಷ್ಟಿಸುತ್ತದೆ. ಅದೇ ರೀತಿ ಕೆಲವರು ಟೀಕೆ ಮಾಡಿ ಪಕ್ಷದಿಂದ ಹೊರ ಹೋಗಿದ್ದಾರೆ ಎಂದು ಆಯನೂರು ಮಂಜುನಾಥ್ ರನ್ನು ಟೀಕಿಸಿದ್ದಾರೆ.
ಬಿಜೆಪಿಯಲ್ಲಿ ಅಧಿಕಾರ ಅನುಭವಿಸಿ ನಾಲ್ಕೂ ಸದನಗಳನ್ನು ಪ್ರವೇಶ ಮಾಡಿದ್ದ ಅವರು, ಈಗ ಪಕ್ಷಕ್ಕೆ ಬೈಯುತ್ತಿದ್ದಾರೆ ಎಂದು ಆಯನೂರು ಮಂಜುನಾಥ್ ವಿರುದ್ಧ ಕಿಡಿ ಕಾರಿದ ಬಿ.ಎಲ್. ಸಂತೋಷ್, ಕೇವಲ ತಿನ್ನುವುದನ್ನು ಜಾಯಮಾನ ಮಾಡಿಕೊಂಡವರಿಂದ ಸಮಾಜಕ್ಕೆ ಯಾವುದೇ ಕೊಡುಗೆ ಇರುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.