ರಾಮನಗರ: ಪರಂಪರಗಾತವಾಗಿದ್ದ ಗೊಂಬೆಗಳ ಉದ್ಯಮವನ್ನು ಕಾಂಗ್ರೆಸ್ ನಾಶ ಮಾಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಸರ್ಕಾರ ಪಂರಪರಾಗತ ಗೊಂಬೆಗಳ ಉದ್ಯಮವನ್ನು ನಾಶ ಮಾಡಿ, ವಿದೇಶಗಳಿಂದ ಗೊಂಬೆಗಳನ್ನು ನಮ್ಮ ದೇಶಕ್ಕೆ ಆಮದು ಮಾಡಿಕೊಂಡಿತ್ತು. ಚನ್ನಪಟ್ಟಣದ ಗೊಂಬೆಗಳ ಬಗ್ಗೆ ನಾನು ಮನ್ ಕೀ ಬಾತ್ ನಲ್ಲಿ ಮಾತನಾಡಿದ್ದೆ. ಅಲ್ಲದೇ ದೇಶವಾಸಿಗಳಿಗೆ ಚನ್ನಪಟ್ಟಣದ ಗೊಂಬೆಗಳನ್ನು ಖರೀದಿ ಮಾಡುವಂತೆ ಕರೆ ಕೊಟ್ಟಿದ್ದೆ. ಇದರಿಂದ ಶೇ.75ರಷ್ಟು ಗೊಂಬೆಗಳ ರಫ್ತು ಕೂಡ ಸಾಧ್ಯವಾಯಿತು. ಸಾವಿರಾರು ಕೋಟಿ ಆದಾಯ ಆರಂಭವಾಯಿತು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ವಾರಂಟಿಯೇ ಮುಗಿದಿದೆ. ಈಗ ಗ್ಯಾರಂಟಿ ಯೋಜನೆಗಳನ್ನು ಘೋಷಿಸುತ್ತಾ ಸುಳ್ಳು ಭರವಸೆ ನೀಡುತ್ತಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ತನ್ನ ಆಶ್ವಾಸನೆಯನ್ನು ಮರೆತಿದೆ. ಅಧಿಕಾರಕ್ಕೆ ಬಂದ ಮೇಲೆ ಯಾವ ಗ್ಯಾರಂಟಿ ಯೋಜನೆಯನ್ನೂ ಅನುಷ್ಠಾನಕ್ಕೆ ತಂದಿಲ್ಲ, ಬಿಜೆಪಿ ಜಾರಿಗೊಳಿಸಿದ್ದ ಯೋಜನೆಗಳನ್ನೂ ನಿಲ್ಲಿಸಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ನ ಮಾತುಗಳನ್ನು ಜೆಡಿಎಸ್ ಕೇಳುತ್ತಿದೆ. ಜೆಡಿಎಸ್ ಕಾಂಗ್ರೆಸ್ ನ ಬಿ ಟೀಮ್, ಹಾಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳನ್ನು ಅಧಿಕಾರದಿಂದ ದೂರವಿಡಬೇಕು ಎಂದು ಹೇಳಿದರು.