ಲೂಧಿಯಾನಾದ ಗಿಯಾಸ್ಪುರದಲ್ಲಿ ಭಾನುವಾರ ಅನಿಲ ಸೋರಿಕೆಯಾದ ನಂತರ ಮೂರು ಮಕ್ಕಳು ಸೇರಿದಂತೆ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ.
ಜನಸಾಂದ್ರತೆಯಿರುವ ಪ್ರದೇಶವಾಗಿರುವುದರಿಂದ ತೆರವು ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ. ಪೀಡಿತ ಪ್ರದೇಶವನ್ನು ರಕ್ಷಣಾ ತಂಡವು ಸುತ್ತುವರೆದು ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲುಧಿಯಾನದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಸ್ವಾತಿ ತಿವಾನಾ, ಅನಿಲ ಸೋರಿಕೆ ಪ್ರದೇಶದಲ್ಲಿ ಜನರನ್ನು ಸ್ಥಳಾಂತರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ಡಿಆರ್ಎಫ್) ತಂಡವು ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ ಎಂದು ಹೇಳಿದರು.
ರಕ್ಷಣಾ ತಂಡವನ್ನು ಸ್ಥಳಕ್ಕೆ ಕರೆಸಲಾಗಿದೆ. ವೈದ್ಯರ ತಂಡ ಮತ್ತು ಆಂಬ್ಯುಲೆನ್ಸ್ ಗಳು ಕೂಡ ಇವೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ. ಅನಿಲ ಸೋರಿಕೆಗೆ ಕಾರಣವೇನು ಎಂದು ದೃಢಪಡಿಸಲಾಗಿಲ್ಲ. ಲೂಧಿಯಾನ ಪೊಲೀಸ್ ಕಮಿಷನರ್ ಮನ್ದೀಪ್ ಸಿಂಗ್ ಸಿದ್ಧು, ಆರಂಭಿಕ ವರದಿಯು ಯಾರೋ ಒಬ್ಬರು ಅಸಡ್ಡೆಯಿಂದ ರಾಸಾಯನಿಕಗಳನ್ನು ಒಳಚರಂಡಿಯಲ್ಲಿ ವಿಲೇವಾರಿ ಮಾಡಿದ್ದಾರೆ ಎಂದು ಸೂಚಿಸುತ್ತದೆ, ಇದು ಅನಿಲ ಸೋರಿಕೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಭಗವಂತ್ ಮಾನ್ ಅವರು, ಲೂಧಿಯಾನಾದ ಗಿಯಾಸ್ಪುರ ಪ್ರದೇಶದಲ್ಲಿನ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಾದ ಘಟನೆಯು ತುಂಬಾ ದುಃಖಕರವಾಗಿದೆ. ಪೊಲೀಸರು, ಸರ್ಕಾರ ಮತ್ತು ಎನ್ಡಿಆರ್ಎಫ್ ತಂಡಗಳು ಸ್ಥಳದಲ್ಲಿವೆ. ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.