ರಾಮನಗರ: ಈ ಬಾರಿಯ ಕರ್ನಾಟಕ ಚುನಾವಣೆ ಮಹತ್ವದ್ದಾಗಿದೆ. ಕರ್ನಾಟಕವನ್ನು ದೇಶದ ನಂಬರ್ ಒನ್ ರಾಜ್ಯ ಮಾಡುವ ಚುನಾವಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣದ ಶೆಟ್ಟಿಹಳ್ಳಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮತ್ತು ಜೆಡಿಎಸ್ ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿವೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಕರ್ನಾಟಕ ರಾಜ್ಯವನ್ನು ಎಟಿಎಂ ಮಾಡಿಕೊಂಡಿದೆ. ಲೂಟಿ ಮಾಡುವುದರಲ್ಲಿ ಜೆಡಿಎಸ್, ಕಾಂಗ್ರೆಸ್ ನವರು ಜಗಳ ಮಾಡುತ್ತಾರೆ. ಜೆಡಿಎಸ್, ಕಾಂಗ್ರೆಸ್ ಕರ್ನಾಟಕ ಅಭಿವೃದ್ಧಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಂಗ್ರೆಸ್, ಜೆಡಿಎಸ್ ಎರಡೂ ಕುಟುಂಬದ ಪಕ್ಷಗಳಾಗಿವೆ. ಬಿಜೆಪಿ ಸರ್ಕಾರದಿಂದ ರಾಮನಗರ ಜನತೆಗೆ ಅನುಕೂಲವಾಗಿದೆ ಎಂದು ಹೇಳಿದ್ದಾರೆ.
ಜೆಡಿಎಸ್ 15 ಸೀಟು ಗೆದ್ದು ಕಿಂಗ್ ಮೇಕರ್ ಆಗುವ ಕನಸು ಕಾಣುತ್ತಿದೆ. ಜೆಡಿಎಸ್ ಪಕ್ಷಕ್ಕೆ ಹಾಕುವ ಪ್ರತಿ ಮತ ಕಾಂಗ್ರೆಸ್ ಗೆ ಹೋದಂತೆ. ಇಂತಹ ಸ್ವಾರ್ಥದ ಪಕ್ಷದಿಂದ ಒಂದು ಕುಟುಂಬಕ್ಕೆ ಮಾತ್ರ ಅನುಕೂಲವಾಗುತ್ತದೆ. ಕರ್ನಾಟಕದ ಲಕ್ಷಾಂತರ ಕುಟುಂಬಗಳಿಗೆ ಯಾವುದೇ ಲಾಭವಾಗುವುದಿಲ್ಲ. ದೆಹಲಿಯಲ್ಲಿ ಕಾಂಗ್ರೆಸ್, ಜೆಡಿಎಸ್ ನಾಯಕರು ಚೆನ್ನಾಗಿ ಇದ್ದಾರೆ ಎಂದು ಜೆಡಿಎಸ್ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದು, ಈ ಬಾರಿಯ ನಿರ್ಧಾರ ಬಹುಮತದ ಸರ್ಕಾರವೆಂದು ಪುನರುಚ್ಚರಿಸಿದ್ದಾರೆ.