ಬೆಳಗಾವಿ: ಸದೃಢ ರಾಷ್ಟ್ರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಚುನಾವಣೆ ಬಂದಿದೆ. ಕರ್ನಾಟಕವನ್ನು ಅಭಿವೃದ್ಧಿಯಲ್ಲಿ ದೇಶದಲ್ಲಿಯೇ ನಂ.1 ಮಾಡಲು ಈ ಚುನಾವಣೆಯಲ್ಲಿ ಬಿಜೆಪಿಗೆ ಆಶಿರ್ವಾದ ಮಾಡುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಬೆಳಗಾವಿಯ ಕುಡುಚಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕರ್ನಾಟಕ ಟ್ರೆಡಿಷನ್, ಟೆಕ್ನಾಲಜಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದಿದೆ. ಜನ ಸೇವೆಯೇ ಜನಾರ್ಧನ ಸೇವೆ ಎಂಬುದನ್ನು ಬಿಜೆಪಿ ನಂಬಿದೆ. ಅತಂತ್ರ ಸ್ಥಿತಿಯಿಂದ ಅಭಿವೃದ್ಧಿ ಅಸಾಧ್ಯ, ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಬೆಂಬಲಿಸಿದರೆ ರಾಜ್ಯವನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುವುದಾಗಿ ಭರವಸೆ ನೀಡಿದರು.
ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ. ಬಸವಣ್ಣ, ಕುವೆಂಪು, ಕನಕದಾಸರು, ರಾಣಿ ಚೆನ್ನಮ್ಮ, ಸಂಗೊಳ್ಳಿರಾಯಣ್ಣರು ನೆಲೆಸಿದ್ದ ಪುಣ್ಯ ಭೂಮಿ ಶೈಕ್ಷಣಿಕವಾಗಿ, ಆಧ್ಯಾತ್ಮಿಕವಾಗಿಯೂ ಮುಂಚೂಣಿಯಲ್ಲಿರುವ ರಾಜ್ಯ ಎಂದರು.
ಬಿಜೆಪಿ ಎಲ್ಲಾ ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಆದರೆ ಕಾಂಗ್ರೆಸ್ ಸಮಾಜವನ್ನು ಒಡೆಯುವ ನಿಟ್ಟಿನಲ್ಲಿ ಹುನ್ನಾರ ನಡೆಸಿದೆ. ಬಸವಣ್ಣನವರು ಸಮಾನತೆಗಾಗಿ ಹೋರಾಟ ಮಾಡಿದ್ದರು. ಆದರೆ ಇಂದಿನ ಕಾಂಗ್ರೆಸ್ ನಾಯಕರು ಸಮಾಜ ವಿಭಜಿಸಲು ನೋಡುತ್ತಿದ್ದಾರೆ. ಅಂತಹ ಕಾಂಗ್ರೆಸ್ ನ್ನು ಕ್ಷಮಿಸಬೇಡಿ ಎಂದು ಗುಡುಗಿದರು.