ಬೆಳಗಾವಿ: ಹೆರಿಗೆ ನೋವಿನಿಂದ ಆಸ್ಪತ್ರೆಗೆ ತೆರಳುತ್ತಿದ್ದ ಗರ್ಭಿಣಿಯೊಬ್ಬರು ಮಾರ್ಗ ಮಧ್ಯದ ಚೆಕ್ ಪೋಸ್ಟ್ ನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ಶುಕ್ರವಾರ ಬೆಳಗ್ಗೆ ಬೆಳಗಾವಿ ಜಿಲ್ಲೆಯ ತೆಲಸಂಗ ಹೊರವಲಯದ ಚೆಕ್ಪೋಸ್ಟ್ ಬಳಿ ನಡೆದಿದೆ.
ಐಗಳಿ ಗ್ರಾಮದ ಗರ್ಭಿಣಿ ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ತೆರಳುವ ವೇಳೆ ತೆಲಸಂಗ ಸಮೀಪದ ಚೆಕ್ ಪೋಸ್ಟ್ ಬಳಿ ನೋವು ಕಾಣಿಸಿಕೊಂಡಿದೆ. ಕರ್ತವ್ಯ ನಿರ್ವಹಿಸುತ್ತಿದ್ದ ಮಿಲಿಟರಿ ಸಿಬ್ಬಂದಿ ಹೆರಿಗೆ ಮಾಡಿಸಿದ್ದು, ಗರ್ಭಿಣಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದ ಚೆಕ್ಪೋಸ್ಟ್ ಬಳಿ ಹೆರಿಗೆ ನೋವು ಹೆಚ್ಚಾಗಿದ್ದರಿಂದ ಚಾಲಕ ವಾಹನ ನಿಲ್ಲಿಸಿದ್ದಾನೆ. ಅಲ್ಲಿದ್ದ ಪೊಲೀಸರು ಮತ್ತು ಮಿಲಿಟರಿ ಸಿಬ್ಬಂದಿ ನೆರವಿಗೆ ಧಾವಿಸಿದ್ದು, ಆಂಬುಲೆನ್ಸ್ ಗೆ ಕರೆ ಮಾಡಿ ಮಾಹಿತಿ ನೀಡಲಾಗಿದೆ.
ಆಂಬುಲೆನ್ಸ್ ಸ್ಥಳಕ್ಕೆ ಬರುವಷ್ಟರಲ್ಲಿ ಮಿಲಿಟರಿ ಸಿಬ್ಬಂದಿ ಹೆರಿಗೆ ಮಾಡಿಸಿದ್ದಾರೆ. ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ನಂತರ ಆಂಬುಲೆನ್ಸ್ ನಲ್ಲಿ ಬಾಣಂತಿ ಹಾಗೂ ಶಿಶುಗಳನ್ನು ತೆಲಸಂಗ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ. ತಾಯಿ, ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.