
ಹೌದು, ಈ ಸುದ್ದಿ ನಂಬಲಸಾಧ್ಯವಾಗಿದ್ದರೂ ಸತ್ಯವಿದು. ಹಸು ಸಿಂಹದ ಮರಿಯನ್ನು ಹೋಲುವ ಕರುವಿಗೆ ಜನ್ಮ ನೀಡಿದೆ. ಈ ಸುದ್ದಿ ಕಾಡ್ಗಿಚ್ಚಿನಂತೆ ಊರು ತುಂಬಾ ಹಬ್ಬಿದೆ. ರೈತ ನತ್ತುಲಾಲ್ ಶಿಲ್ಪಕರ್ ಎಂಬುವವರ ಹಸು ಈ ವಿಚಿತ್ರ ಕರುವಿಗೆ ಜನ್ಮ ನೀಡಿದೆ. ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರ ದಂಡೇ ರೈತನ ಮನೆಯತ್ತ ನೆರೆದಿದ್ದು, ಕುತೂಹಲದಿಂದ ಕರುವನ್ನು ವೀಕ್ಷಿಸಿದ್ದಾರೆ. ಊರವರು ಮಾತ್ರವಲ್ಲ ದೂರದ ಗ್ರಾಮಸ್ಥರು ಕೂಡ ಈ ಕರುವನ್ನು ವೀಕ್ಷಿಸಲು ಸರತಿ ಸಾಲಿನಲ್ಲಿ ಆಗಮಿಸಿದ್ದಾರೆ.
ಹಸುವಿನ ಗರ್ಭಾಶಯದಲ್ಲಿನ ಸಮಸ್ಯೆಯಿಂದ ಈ ರೀತಿಯ ಕರುವಿನ ಜನನವಾಗಿದೆ ಎಂದು ಪಶುವೈದ್ಯ ಇಲಾಖೆ ತಿಳಿಸಿದೆ. ಕರು ಆರಂಭದಲ್ಲಿ ಆರೋಗ್ಯವಾಗಿದ್ದರೂ, ಹುಟ್ಟಿದ ಮೂವತ್ತು ನಿಮಿಷಗಳಲ್ಲಿ ಕೊನೆಯುಸಿರೆಳೆದಿದೆ. ಇದು ಪ್ರಕೃತಿಯ ಪವಾಡವಲ್ಲ ಎಂದು ಪಶುವೈದ್ಯ ಎನ್.ಕೆ. ತಿವಾರಿ ಹೇಳಿದ್ದಾರೆ. ಭ್ರೂಣವು ಸರಿಯಾಗಿ ಬೆಳವಣಿಗೆಯಾಗದ ಕಾರಣ ಇಂತಹ ಕರು ಜನ್ಮ ತಾಳಿದೆ ಎಂದು ಅವರು ತಿಳಿಸಿದ್ದಾರೆ.

