ಪುರುಷರು ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಆದರೆ ಚೆನ್ನಾಗಿ ಕಾಣಬೇಕು ಎಂಬ ಆಸೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಶಿಸ್ತಾಗಿ ಡ್ರೆಸ್ ಮಾಡಿಕೊಳ್ಳುವುದು ಮಾತ್ರವಲ್ಲ, ತ್ವಚೆಯ ಬಗ್ಗೆ ಕೂಡ ಗಮನಕೊಟ್ಟಲ್ಲಿ ಮಾತ್ರ ಪುರುಷರು ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಅನೇಕ ಬಾರಿ ಪುರುಷರು ತ್ವಚೆಯ ಆರೈಕೆಗೆ ಸಂಬಂಧಿಸಿದಂತೆ ಕೆಲವು ತಪ್ಪುಗಳನ್ನು ಮಾಡುತ್ತಾರೆ, ಅದು ಅವರಿಗೆ ಹಾನಿಕಾರಕವಾಗಿದೆ.
ಚರ್ಮಕ್ಕೆ ಸಂಬಂಧಿಸಿದ ಈ ಪ್ರಮಾದಗಳಿಂದ ವಯಸ್ಸಿಗೆ ಮುಂಚೆಯೇ ಮುಖದಲ್ಲಿ ಮಚ್ಚೆಗಳು ಮತ್ತು ಮಂದತೆಯಂತಹ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಇದರಿಂದಾಗಿ ಮುಖವು ನಿರ್ಜೀವವಾಗಿಬಿಡುತ್ತದೆ. ಪುರುಷರು ತ್ವಚೆಯ ಬಗ್ಗೆ ಯಾವ ರೀತಿ ಕಾಳಜಿ ವಹಿಸಬೇಕು ಅನ್ನೋದನ್ನು ನೋಡೋಣ.
ಮಾಯಿಶ್ಚರೈಸರ್ ಬಳಕೆ
ಪುರುಷರು ತಮ್ಮ ಚರ್ಮವು ಮಹಿಳೆಯರಿಗಿಂತ ಹೆಚ್ಚು ಎಣ್ಣೆಯುಕ್ತವಾಗಿದೆ ಎಂದು ಭಾವಿಸುತ್ತಾರೆ, ಈ ಕಾರಣದಿಂದಾಗಿ ಅವರು ಲೋಷನ್ ಅಥವಾ ಕ್ರೀಮ್ ಹಚ್ಚಿಕೊಳ್ಳುವುದಿಲ್ಲ. ಆದರೆ ಇದು ತಪ್ಪು ಕಲ್ಪನೆ. ಏಕೆಂದರೆ ಪುರುಷರ ಚರ್ಮಕ್ಕೂ ತೇವಾಂಶ ಬೇಕಾಗುತ್ತದೆ. ಅದಕ್ಕಾಗಿಯೇ ಪುರುಷರು ಪ್ರತಿದಿನ ತಮ್ಮ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಬೇಕು. ಕ್ರೀಂ ಹಚ್ಚದಿದ್ದರೆ ಮುಖ ಒಣಗುತ್ತದೆ ಮತ್ತು ವಯಸ್ಸಿಗೆ ಮುನ್ನವೇ ಕಳೆಗುಂದಿದಂತೆ ಕಾಣುತ್ತದೆ.
ಕ್ಷೌರದ ನಂತರ ಆಫ್ಟರ್ ಶೇವ್ ಬಳಕೆ
ಶೇವಿಂಗ್ ಮಾಡಿದ ನಂತರ ಹೆಚ್ಚಿನ ಪುರುಷರು ಆಫ್ಟರ್ ಶೇವ್ ಹಚ್ಚಿಕೊಳ್ಳುತ್ತಾರೆ. ಆದರೆ ಹಾಗೆ ಮಾಡುವುದರಿಂದ ನಿಮ್ಮ ಮುಖಕ್ಕೆ ಹಾನಿಯಾಗಬಹುದು. ಏಕೆಂದರೆ ಆಫ್ಟರ್ ಶೇವ್ನಲ್ಲಿ ಆಲ್ಕೋಹಾಲ್ ಇರುತ್ತದೆ, ಅದು ಚರ್ಮವನ್ನು ಒಣಗಿಸುತ್ತದೆ. ಅದಕ್ಕಾಗಿಯೇ ಕ್ಷೌರದ ನಂತರ ಮಾಯಿಶ್ಚರೈಸರ್ ಬಳಸಿ.
ರೇಜರ್ ಬಂಪ್
ಶೇವಿಂಗ್ ಮಾಡಿದ ನಂತರ ಕೆಲವರಿಗೆ ಮುಖದಲ್ಲಿ ದದ್ದುಗಳಾಗಬಹುದು. ಇದಕ್ಕೆ ಕಾರಣಗಳು ಹಲವು. ಕೆಲವರು ಇದಕ್ಕೆ ರೇಜರ್ ಕಾರಣ ಎಂದು ಭಾವಿಸುತ್ತಾರೆ, ಆದರೆ ಇದು ತಪ್ಪು. ಗಡ್ಡ ಮೃದುವಾಗಿಲ್ಲದ ಕಾರಣ ಈ ರೀತಿ ಆಗುತ್ತದೆ. ಹಾಗಾಗಿ ಕ್ಷೌರ ಮಾಡುವ ಮೊದಲು ನಿಮ್ಮ ಗಡ್ಡವನ್ನು ಬೆಚ್ಚಗಿನ ನೀರಿನಿಂದ ತೊಳೆಯಬೇಕು. ಹೀಗೆ ಮಾಡುವುದರಿಂದ ನಿಮ್ಮ ಮುಖದ ಮೇಲೆ ಉಬ್ಬು ಸಮಸ್ಯೆ ಇರುವುದಿಲ್ಲ.