ಬೆಂಗಳೂರು: 6 ಲಕ್ಷಕ್ಕೂ ಅಧಿಕ ಮತದಾರರ ದತ್ತಾಂಶ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಕೋರಮಂಗಲದ ಖಾಸಗಿ ಕಂಪನಿಯೊಂದರ ವಿರುದ್ಧ ಆಗ್ನೇಯ ವಿಭಾಗದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಕೆಲವು ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹಣ ಪಡೆದು ಮತದಾರರ ಮಾಹಿತಿ ಮಾರಾಟ ಮಾಡುತ್ತಿರುವ ಬಗ್ಗೆ ಚುನಾವಣಾ ಅಧಿಕಾರಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಳೆದ ನವೆಂಬರ್ ನಲ್ಲಿ ಚಿಲುಮೆ ಸಂಸ್ಥೆ ಮತದಾರರ ದತ್ತಾಂಶ ಮಾರಾಟ ಮಾಡಿದ್ದು, ಅದೇ ಮಾದರಿಯಲ್ಲೇ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಈ ಸಂಸ್ಥೆ ಸಮೀಕ್ಷೆ ನಡೆಸಿದೆ. ಮತದಾರರ ಮಾಹಿತಿ, ಹೆಸರು, ವಿಳಾಸ, ಜಾತಿ, ಮೊಬೈಲ್ ನಂಬರ್, ಕಳೆದ ಸಲ ಬೆಂಬಲಿಸಿದ ಪಕ್ಷ, ಈ ಬಾರಿ ಬೆಂಬಲಿಸುವ ಪಕ್ಷ ಮೊದಲಾದ ಮಾಹಿತಿಗಳನ್ನು ಪ್ರತ್ಯೇಕ ಆಪ್ ಮೂಲಕ ಸಂಗ್ರಹಿಸಿತ್ತು ಎನ್ನಲಾಗಿದೆ.
ವೆಬ್ಸೈಟ್ ನಲ್ಲಿ 25,000 ರೂ. ಜೊತೆಗೆ 500 ರೂ. ಸೇವಾ ಶುಲ್ಕ ನೀಡಿದರೆ ಕ್ಷೇತ್ರದ ಮತದಾರರ ವಿವರ ಪಡೆದು ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಆಮಿಷದ ಜಾಹೀರಾತು ನೀಡಲಾಗಿದೆ. ಇದಲ್ಲದೇ ಮತದಾರರ ಮೊಬೈಲ್ ಸಂಖ್ಯೆಗಳಿಗೆ ಸಂದೇಶ, ಧ್ವನಿ ಮುದ್ರಿಕೆ, ಪ್ರಣಾಳಿಕೆ ಕಳುಹಿಸಬಹುದು ಎಂದು ಹೇಳಲಾಗಿದೆ.