ಮಂಡ್ಯ: ಕರ್ನಾಟಕ ಹಾಗೂ ಉತ್ತರ ಪ್ರದೇಶದ ನಡುವೆ ಅವಿನಾಭಾವ ಸಂಬಂಧವಿದೆ. ಎರಡು ರಾಜ್ಯಗಳ ನಡುವಿನ ಸಂಬಂಧ ಇಂದು ನಿನ್ನೆಯದ್ದಲ್ಲ, ತ್ರೇತಾಯುಗ ಕಾಲದಿಂದಲೂ ಇದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಮ್ ಪರ ಚುನಾವಣಾ ಪ್ರಚಾರ ನಡೆಸಿದ ಸಿಎಂ ಯೋಗಿ ಆದಿತ್ಯನಾಥ್, ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡುತ್ತಾ, ಮಂಡ್ಯ ಜಿಲ್ಲೆಗೆ ಆಗಮಿಸಿದ್ದು ಖುಷಿಯಾಗಿದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮ, ಆಂಜನೇಯರ ವನವಾಸದ ಕುರುಹುಗಳು ಮಂಡ್ಯದಲ್ಲಿವೆ. ಕರ್ನಾಟಕದ ಅಂಜನಾದ್ರಿಯಲ್ಲಿ ಹನುಮ ಹುಟ್ಟಿದ ಜನ್ಮಸ್ಥಳವಿದೆ. ಆದಿಚುಂಚನಗಿರಿ ಮಠವಿರುವುದು ಮಂಡ್ಯದಲ್ಲಿಯೇ ತ್ರೇತಾಯುಗದ ಕಾಲದಿಂದಲೂ ಯುಪಿ ಹಾಗೂ ಕರ್ನಾಟಕದ ಮಧ್ಯೆ ಅವಿನಾಭಾವ ಸಂಬಂಧವಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದಮೇಲೆ ದೇಶದಲ್ಲಿ ಹಲವು ಬದಲಾವಣೆಗಳು ಆಗಿವೆ. ದೇಶದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದಾಗಿ ಅಭಿವೃದ್ಧಿ ಕೆಲಸಗಳು ವೇಗ ಪಡೆದಿವೆ. ಪ್ರಧಾನಿ ಮೋದಿಯವರ ಏಕ್ ಭಾರತ್ ಶ್ರೇಷ್ಠ ಭಾರತ್ ಪರಿಕಲ್ಪನೆ ಸಾಕಾರಗೊಳ್ಳುತ್ತಿದೆ. ಕಾಂಗ್ರೆಸ್ ಸರ್ಕಾರ ಪಿಎಫ್ ಐ ತುಷ್ಟೀಕರಣ ಮಾಡಿತ್ತು. ಡಬಲ್ ಇಂಜಿನ್ ಸರ್ಕಾರ ಪಿ ಎಫ್ ಐ ಬ್ಯಾನ್ ಮಾಡಿತು. ಉತರ ಪ್ರದೇಶದಲ್ಲಿ ಕಳೆದ 6 ವರ್ಷಗಳಿಂದ ಯಾವುದೇ ಗಲಾಟೆ ನಡೆದಿಲ್ಲ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರೌಡಿಗಳನ್ನು ಮಟ್ಟಹಾಕಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕ ಸರ್ಕಾರ ಜಾರಿಗೊಳಿಸಿದೆ. ಈ ನಿಟ್ಟಿನಲ್ಲಿ ಸಿಎಂ ಬೊಮ್ಮಾಯಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಅಯೋಧ್ಯಾ ರಾಮಮಂದಿರ ಉದ್ಘಾಟನೆಗೆ ಕರ್ನಾಟಕದ ಜನತೆಯನ್ನು ಪ್ರೀತಿಯಿಂದ ಸ್ವಾಗತಿಸುತ್ತೇನೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು.