ಕರ್ನಾಟಕ ವಿಧಾನಸಭಾ ಚುನಾವಣೆ ಬಳಿಕ ಮಹಾರಾಷ್ಟ್ರದಲ್ಲಿ ಮತ್ತೊಂದು ಬದಲಾವಣೆಯಾಗುವ ಸಾಧ್ಯತೆ ಇದೆ. ಉಪ ಮುಖ್ಯಮಂತ್ರಿಯಾಗಿರುವ ದೇವೇಂದ್ರ ಫಡ್ನವೀಸ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಬಿಜೆಪಿ ಹೈ ಕಮಾಂಡ್ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್.ಸಿ.ಪಿ. ಸರ್ಕಾರವನ್ನು ಏಕನಾಥ್ ಶಿಂಧೆ ಬಣ ಕೆಡವಿತ್ತು. ಆ ಬಳಿಕ ನಡೆದ ಬೆಳವಣಿಗೆಯಲ್ಲಿ ಬಿಜೆಪಿಯೊಂದಿಗೆ ಸೇರಿಕೊಂಡು ಶಿಂಧೆ ನೇತೃತ್ವದ ಶಿವಸೇನೆ ಬಣ ಸರ್ಕಾರ ರಚಿಸಿದ್ದು, ಏಕನಾಥ್ ಶಿಂಧೆ ಮುಖ್ಯಮಂತ್ರಿ ಹಾಗೂ ಬಿಜೆಪಿಯ ದೇವೇಂದ್ರ ಫಡ್ನವೀಸ್ ಉಪ ಮುಖ್ಯಮಂತ್ರಿಯಾಗಿದ್ದರು.
ಆದರೆ ಏಕನಾಥ್ ಶಿಂಧೆ ಕಾರ್ಯ ವೈಖರಿ ಬಿಜೆಪಿ ನಾಯಕರಿಗೆ ಅಸಮಾಧಾನ ತರಿಸಿದೆ ಎನ್ನಲಾಗಿದ್ದು, ಜೊತೆಗೆ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವೂ ಕಾಡುತ್ತಿದೆ. ಇತ್ತೀಚೆಗೆ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ 48 ಕ್ಷೇತ್ರಗಳ ಮಹಾರಾಷ್ಟ್ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 22 ರಿಂದ 25 ಸ್ಥಾನಗಳನ್ನು ಮಾತ್ರ ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ಮಾಡಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.