ಸಶಸ್ತ್ರ ಪಡೆಗಳಿಗೆ ಗ್ರಾಹಕ ತಂತ್ರಜ್ಞಾನ ಉತ್ಪನ್ನಗಳನ್ನು ಪೂರೈಸುವ ಪುಣೆ ಮೂಲದ ಉಡ್ಚಲೋ ಸಂಸ್ಥೆಯು ಅಭಿವೃದ್ಧಿ ಪಡಿಸಿರುವ ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಬೈಸಿಕಲ್ ’ವೀರ್ ಬೈಕ್’ ಇದೇ ಭೂಮಿ ದಿನಂದು (ಏಪ್ರಿಲ್ 22) ಬಿಡುಗಡೆಯಾಗಲಿದೆ.
ಸಶಸ್ತ್ರ ಪಡೆಗಳಿಂದ ಪ್ರೇರಣೆ ಪಡೆದು ಪರಿಸರ-ಸ್ನೇಹಿ ಹಾಗೂ ಕೈಗೆಟುಕುವ ಸಾರಿಗೆ ಅವಕಾಶವನ್ನು ಜನರಿಗೆ ಒದಗಿಸಲು ಉಡ್ಚಲೋ ಈ ಹೆಜ್ಜೆ ಇಟ್ಟಿದೆ. ಸಶಸ್ತ್ರ ಪಡೆಗಳಲ್ಲಿರುವ ಯೋಧರಿಂದ ಸ್ಪೂರ್ತಿ ಪಡೆದಿದ್ದಲ್ಲದೇ, ಇಂಗ್ಲಿಷ್ನಲ್ಲಿ VIR ಎಂದರೆ ಭೌತಶಾಸ್ತ್ರದ ಓಮ್ಸ್ ನಿಯಮವಾದ V = IRನ ಸೂಚಕವೂ ಆಗಿದೆ.
25,995 ರೂ. ಬೆಲೆ ನಿಗದಿಯಾಗಿರುವ ಈ ಬೈಕ್ ಅನ್ನು ಸಶಸ್ತ್ರ ಪಡೆಗಳ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡುವ ನಿರೀಕ್ಷೆ ಇದೆ.
ಈ ಬೈಸಿಕಲ್ ಎಂಥ ವಾತಾವರಣದಲ್ಲೂ ಕೆಲಸ ಮಾಡಬಲ್ಲದು ಎಂದು ವೀರ್ ಬೈಕ್ನ ಸಹ-ಸ್ಥಾಪಕ ಮತ್ತು ಆರ್&ಡಿ ಮುಖ್ಯಸ್ಥ ಸಹಿಲ್ ಉತ್ತೇಕರ್ ತಿಳಿಸಿದ್ದಾರೆ.
ಹಗುರವಾದ ಫ್ರೇಂ, ಎಲೆಕ್ಟ್ರಿಕ್ ಕಟ್-ಆಫ್ ಇರುವ ಡಿಸ್ಕ್ ಬ್ರೇಕ್, ಮತ್ತು ಅಡ್ಜಸ್ಟ್ ಮಾಡಬಹುದಾದ ಆಸನವನ್ನು ಹೊಂದಿರುವ ಈ ಬೈಕ್ನ ಎಲ್ಲಾ ಭಾಗಗಳನ್ನು ಭಾರತದಲ್ಲೇ ನಿರ್ಮಿಸಲಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ’ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ಬೆಂಬಲ ಕೊಡುತ್ತದೆ ಎಂದಿದ್ದಾರೆ ಉತ್ತೇಕರ್.