ಅತ್ಯಾಚಾರ ಆಪಾದಿತನಾಗಿರುವ ಆಸ್ತಿ ಡೀಲರ್ ಒಬ್ಬರಿಗೆ ಬ್ಲಾಕ್ಮೇಲ್ ಮಾಡಿಕೊಂಡು ಆತನಲ್ಲಿ 10 ಲಕ್ಷ ರೂ.ಗಳ ಬೇಡಿಕೆ ಇಟ್ಟ ಆರೋಪದ ಮೇಲೆ ಆಪ್ ಶಾಸಕ ಜಗದೀಪ್ ಗೋಲ್ಡೀ ಕಂಬೋಜ್ರ ತಂದೆಯನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
ಆಪಾದಿತ ಸುರೀಂದರ್ ಕಂಬೋಜ್ ಸುಲಿಗೆ ಮಾಡಿದ್ದ 50,000ರೂ.ಗಳನ್ನು ಆತನಿಂದ ಮರಳಿ ಪಡೆಯಲಾಗಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ತಮ್ಮ ವಿರುದ್ಧ ಗ್ರಾಹಕಿಯೊಬ್ಬರು ಸುಳ್ಳು ಅತ್ಯಾಚಾರದ ದೂರು ದಾಖಲಿಸಿದ್ದರು ಎಂದು ಪೊಲೀಸ್ಗೆ ಕೊಟ್ಟ ದೂರಿನಲ್ಲಿ ತಿಳಿಸಿರುವ ಆಸ್ತಿಯ ಡೀಲರ್ ಸುನೀಲ್ ಕುಮಾರ್, ಇದನ್ನೇ ದಾಳವನ್ನಾಗಿಟ್ಟುಕೊಂಡು ಆಪ್ ಶಾಸಕನ ತಂದೆ ತಮ್ಮ ಬಳಿ ಹತ್ತು ಲಕ್ಷ ರೂಪಾಯಿಗಳ ಬೇಡಿಕೆ ಇಟ್ಟಿದ್ದರು ಎಂದಿದ್ದಾರೆ.
ತಮ್ಮ ವಿರುದ್ಧದ ಅತ್ಯಾಚಾರದ ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳಲೆಂದು ಸುನೀಲ್, ಸುರೀಂದರ್ಗೆ 50,000ರೂಗಳನ್ನು ನೀಡಿದ್ದರು. ತಮ್ಮಿಂದ ಸುಲಿಗೆಯಾದ ದುಡ್ಡಿನ ದಾಖಲೆಗಳನ್ನು ಸಹ ಸುನೀಲ್ ಒದಗಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಸುಳ್ಳು ಅತ್ಯಾಚಾರದ ಎಫ್ಐಆರ್ ದಾಖಲಿಸುವ ಪ್ರಯತ್ನ ಮಾಡಿದ ಆರೋಪದ ಮೇಲೆ ಸುರೀಂದರ್ ಕಂಬೋಜ್, ದೂರು ನೀಡಿದ ಮಹಿಳೆ ಹಾಗೂ ಆಕೆಯ ಪತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದೇ ವೇಳೆ, ದೂರು ಕೊಟ್ಟ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಆಪಾದನೆ ಮೇಲೆ ಸುನೀಲ್ ಕುಮಾರ್ ವಿರುದ್ಧವೂ ಸಹ ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ ಪೊಲೀಸರು.